ಸಾಹಿತಿಗಳಿಗೆ ಬೇಕು ಸಾಮಾಜಿಕ ಜವಾಬ್ದಾರಿ

bidar 1
Published on

ಬೀದರ್: ಅನುಭವ ಸಾಮಥ್ರ್ಯದಿಂದ ಸಾಹಿತ್ಯ ರಚಿಸಿದರೂ ಸಾಹಿತಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನಮಟ್ಟು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸಾಹಿತಿಗಳು ಮತ್ತು ಸಾಮಾಜಿಕ ಜವಾಬ್ದಾರಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉಪದೇಶ ಸರಳ. ಆದರೆ ಅನುಷ್ಠಾನ ಮಾಡುವುದು ಕಷ್ಟ. ನಮ್ಮ ವಿಚಾರಗಳಿಗೆ ಪ್ರಚೋದನೆಗಿಂತ ಪ್ರಜ್ಞೆ ಭಾವನೆ ಇದ್ದಾಗ ಅದಕ್ಕೊಂದು ಮೌಲ್ಯ ಸಿಗುತ್ತದೆ ಎಂದರು.
ಸಾಹಿತಿಯ ಬದುಕು ಮತ್ತು ಬರವಣಿಗೆ ಒಂದಕ್ಕೊಂದು ಪೂರಕವಾಗಿರಬೇಕು. ಸಾಹಿತಿಗಳು, ಸಂಗೀತಗಾರರು, ಕಲಾವಿದರು, ಕ್ರೀಡಾಪಟುಗಳು ಸಾಮಾಜಿಕ ಚಿಂತನೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಪ್ರಸ್ತುತ ತಂತ್ರಜ್ಞಾನ ಬೆಳೆದಿದೆ. ಆದರೆ ಸಾಧನೆಯ ಮನಸ್ಸುಗಳ ಕೊರತೆ ಕಾಣುತ್ತಿದ್ದೇವೆ. ಶಿಕ್ಷಣಕ್ಕೂ ಜ್ಞಾನಕ್ಕೂ ತುಂಬಾ ವ್ಯತ್ಯಾಸ ಇದ್ದು, ಇಂದಿನ ಯುವ ಶಕ್ತಿ ಈ ಕಡೆಗೆ ಗಮನ ಹರಿಸುತ್ತಿಲ್ಲ. ಪಠ್ಯೇತರ ಚಟುವಟಿಕೆಗಳಿಗೆ ಯಾರೊಬ್ಬರು ಉತ್ತೇಜನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ ಮಾತನಾಡಿ, ಸಾಹಿತಿಗಳಿಗೆ ಮುಕ್ತವಾದ ವಿಚಾರ ಹಂಚಿಕೊಳ್ಳುವ ಹಕ್ಕಿದೆ. ಆದರೆ ಅದು ಮತ್ತೊಬ್ಬರಿಗೆ ತೊಂದರೆ, ಅವಹೇಳನವಾಗಬಾರದು. ಇಂದಿನ ಓಲೈಕೆ ಸಾಹಿತಿ ಬೇಡ ಹಾಗೂ ಕೆಟ್ಟ ಸಾಹಿತ್ಯದಿಂದ ಏನೇನು ಉಪಯೋಗವಿಲ್ಲ. ಇಂದಿನ ಮೊಬೈಲ್ ಗೀಳಿನ ಮುಂದೆ ಓದುವ ಅಭಿರುಚಿ ಸಂಪೂರ್ಣ ಕಡಿಮೆಯಾಗಿ ಕಾಪಿ-ಪೇಸ್ಟ್ ಕಾರ್ಯ ಮುಂದುವರಿದಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಮಾತನಾಡಿದರು. ಸಾಹಿತಿ ವೀರಶೆಟ್ಟಿ ಚೌಕನಪಳ್ಳಿ, ಡಾ.ರಾಮಚಂದ್ರ ಗಣಾಪೂರ, ವಿನಯ ಮಾಳಗೆ ಇತರರಿದ್ದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಸ್ವಾಗತಿಸಿದರು. ಪ್ರೊ.ಶಿವಕುಮಾರ ಕಟ್ಟೆ ನಿರೂಪಣೆ ಮಾಡಿದರು. ಟಿ.ಎಂ. ಮಚ್ಚೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net