

ಬೀದರ್: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಪಕ್ಷದ ಬಾವುಟ, ನರೇಂದ್ರ ಮೋದಿ ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿ ಘೋಷಣೆ ಮೊಳಗಿಸಿದರು. ಹರಿಯಾಣ ಫಲಿತಾಂಶ ಮಹಾರಾಷ್ಟ್ರ ಇತರ ಚುನಾವಣೆಗಳಿಗೆ ದಿಕ್ಸೂಚಿ. ದೇಶದಲ್ಲಿ ಬಿಜೆಪಿ ಪರ ಅಲೆ ಎಲ್ಲೆಡೆ ಇದೆ. ಮೋದಿ ಹವಾ ಭಾರಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ. ಕಾಂಗ್ರೆಸ್ ಬರುವ ಚುನಾವಣೆಯಲ್ಲಿ ಧೂಳೀಪಟವಾಗುವುದು ಸ್ಪಷ್ಟ ಎಂದು ಪ್ರಮುಖರು ಹೇಳಿದರು.
ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಐತಿಹಾಸಿಕ. ಅತ್ಯುತ್ತಮ ನಾಯಕತ್ವ, ಅಭಿವೃದ್ಧಿ ಹಾಗೂ ಜನ ಕಲ್ಯಾಣಕ್ಕೆ ಅಲ್ಲಿನ ಮತದಾರರು ಬಿಜೆಪಿಗೆ ಬೆಂಬಲಿಸುವ ಮೂಲಕ ಮೂರನೇ ಸಲ ಅಧಿಕಾರಕ್ಕೆ ತಂದಿದ್ದಾರೆ ಎಂದು ಹೇಳಿದರು.
ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಯರನಳ್ಳಿ, ನಗರ ಘಟಕ ಅಧ್ಯಕ್ಷ ಶಶಿಧರ ಹೊಸಳ್ಳಿ, ಪ್ರಮುಖರಾದ ಗುರುನಾಥ ರಾಜಗೀರಾ, ಸುಭಾಷ ಮಡಿವಾಳ, ಸಂಜುಕುಮಾರ ಪಾಟೀಲ್, ದೀಪಕ ಗಾದಗೆ, ಸುನೀಲ ಗೌಳಿ, ಗುರು ಬರಗಲೆ, ನಿತಿನ್ ನವಲಕಲೆ, ಪ್ರಕಾಶ, ಬಸವರಾಜ, ಗಣೇಶ ಭೋಸ್ಲೆ ಇತರರಿದ್ದರು.