ಮುಂದುವರಿದ ವೃಂದ ಸಂಘ, ಒಕ್ಕೂಟದ ಮುಷ್ಕರ

Pdo Dharani - Copy
Published on

ಬೀದರ್: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಎಲ್ಲ ಹುದ್ದೆಗಳನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಎರಡು ದಿನ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಿದ್ದ ಪಿಡಿಒ, ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಸೋಮವಾರದಿಂದ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಧರಣಿ ನಡೆಸುತ್ತಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಬಹಳ ಹೊಣೆಗಾರಿಕೆ ಇದೆ. ಹುದ್ದೆ ಉನ್ನತೀಕರಿಸಿದರೆ ಆಡಳಿತಾತ್ಮಕವಾಗಿ ಅನೇಕ ಅನುಕೂಲಗಳು ಆಗಲಿವೆ. ಗ್ರಾಮಾಭಿವೃದ್ಧಿಗೂ ನೆರವಾಗಲಿದೆ ಎಂದು ಮಂಗಳವಾರ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ ಗ್ರೇಡ್) ಹುದ್ದೆ ಉನ್ನತೀಕರಣ ಸಂಘದ ಕಲಬುರಗಿ ವಿಭಾಗೀಯ ಕಾರ್ಯದರ್ಶಿ ಉಮೇಶ ಜಾಬಾ ಹೇಳಿದರು.
ಬಹುತೇಕ ಪಿಡಿಒಗಳು ಈಗಾಗಲೇ ಗ್ರೂ ಬಿ ವೇತನ ಶ್ರೇಣಿಯನ್ನು ದಾಟಿದ್ದಾರೆ. ಹೀಗಾಗಿ ಹುದ್ದೆ ಉನ್ನತೀಕರಣದಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆ ಉಂಟಾಗುವುದಿಲ್ಲ. ಕಾರಣ ಹುದ್ದೆ ಉನ್ನತೀಕರಿಸಬೇಕು. ಎಲ್ಲ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದರು.
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಶರತಕುಮಾರ ಅಭಿಮಾನ, ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಪಾಟೀಲ, ಉಪಾಧ್ಯಕ್ಷ ಶಿವಶೆಟ್ಟಿ ಸೀತಾ, ಖಜಾಂಚಿ ದೇವಪ್ಪ, ವಿವಿಧ ವೃಂದ ಸಂಘಗಳ ಸಂಜುಕುಮಾರ ಶೇರಿಕಾರ್, ವಿವೇಕ್ ಸ್ವಾಮಿ, ಸಾಲೋಮನ್ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net