

ಬೀದರ್: ಹೈದರಾಬಾದ್‍ನ ಒಸಿಎಫ್ ಸಂಘಟನೆ ಹಾಗೂ ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ತಾಲ್ಲೂಕಿನ ಮೊಗದಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಮೀಪ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 250 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.
ಡಾ. ಸುಧಾಕರ ಅವರ ನೇತೃತ್ವದಲ್ಲಿ ವೈದ್ಯರು ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳ ತಪಾಸಣೆ, ರಕ್ತ ಪರೀಕ್ಷೆ ಮಾಡಿದರು. ಉಚಿತ ಔಷಧಿ ಸಹ ವಿತರಿಸಿದರು.
ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಸಂಜಯ್ ಜಾಗೀರದಾರ್ ಮಾತನಾಡಿ, ಬಡ ಜನರ ಅನುಕೂಲಕ್ಕಾಗಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಬರುವ ದಿನಗಳಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಕಮಠಾಣ, ಬಗದಲ್, ಮನ್ನಳ್ಳಿ, ನಿರ್ಣಾ, ಮನ್ನಾಎಖ್ಖೆಳ್ಳಿ, ಬೇಮಳಖೇಡದಲ್ಲಿ ಶಿಬಿರ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಒಸಿಎಫ್ ಸಂಘಟನೆಯು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರಗಳ ಮೂಲಕ ಜನರಿಗೆ ನೆರವಾಗುತ್ತಿದೆ. ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.
ಪಾಸ್ಟರ್ ಸತೀಶ್, ಪ್ರಮುಖರಾದ ಸಾಲೋಮನ್ ಡೇವಿಡ್, ಸಾಲೋಮನ್ ಕಮಠಾಣ, ಗುಂಡಪ್ಪ, ದಶರಥ ಮತ್ತಿತರರು ಇದ್ದರು.