

ಬೀದರ್: ಪಾಲಿಸಿದಾರರ ಜೀವ ವಿಮೆ ಕಂತಿಗೆ ಜಿಎಸ್‍ಟಿಯಿಂದ ವಿನಾಯಿತಿ ನೀಡಬೇಕು ಎಂದು ಲೈಫ್ ಇನ್ಸುರೆನ್ಸ್ ಫೆಡರೇಷನ್ ಆಫ್ ಇಂಡಿಯಾದ ಜಿಲ್ಲಾ ಘಟಕದ ಅಧ್ಯಕ್ಷ ಶಿವಶರಣಪ್ಪ ಹಣಮಶೆಟ್ಟೆ ಒತ್ತಾಯಿಸಿದರು.
ನಗರದ ಭಾರತೀಯ ಜೀವ ವಿಮಾ ನಿಗಮದ ಶಾಖಾ ಕಚೇರಿಯಲ್ಲಿ ಶನಿವಾರ ನಡೆದ ಇನ್ಸುರೆನ್ಸ್ ಫೆಡರೇಷನ್ ಆಫ್ ಇಂಡಿಯಾದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘಟನೆಯು ಕೇಂದ್ರ ಸರ್ಕಾರ ವಿವಿಧ ಬೇಡಿಕೆಗಳನ್ನು ಈಡೇರಿಸುವ ವರೆಗೆ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು.
ಜನರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು.
ನಿಗಮದ ಶಾಖಾಧಿಕಾರಿ ಕವಿತಾ ಯಲಬುರ್ಗಿ ಮಾತನಾಡಿ, ಜೀವ ವಿಮಾ ಪ್ರತಿನಿಧಿಗಳು ಉತ್ತಮ ಭವಿಷ್ಯಕ್ಕಾಗಿ ಉಳಿತಾಯದ ಅಗತ್ಯತೆಯನ್ನು ಜನರಿಗೆ ಮನವರಿಕೆ ಮಾಡುತ್ತಾರೆ ಎಂದು ತಿಳಿಸಿದರು.
ಉಪ ಶಾಖಾಧಿಕಾರಿ ರಾಘವ್ ರೆಡ್ಡಿ, ಸಂಘಟನೆಯ ರಾಯಚೂರು ವಿಭಾಗದ ಪದಾಧಿಕಾರಿಗಳಾದ ಮಂಜುನಾಥ ಬಿರಾದಾರ, ಜೆ.ಸಿ. ಗಂಗಶೆಟ್ಟಿ ಮಾತನಾಡಿದರು.
ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘಟನೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಸನ್ಮುಕಯ್ಯ ಸ್ವಾಮಿ, ದೇವೇಂದ್ರ ಡಿಗ್ಗಿ, ಶಿವಾನಂದ ಕೊಳ್ಳೂರ, ಸವಿತಾ ಪಾಟೀಲ, ರಶ್ಮಿ ರಾಮತೆರೆ, ಯೋಗಿತಾ ಕೌಟಗೆ, ಲತಾ ಎಕಲಾರೆ ಉಪಸ್ಥಿತರಿದ್ದರು.
ಸಂಘಟನೆಯ ಜಿಲ್ಲಾ ಘಟಕದ ಖಜಾಂಚಿ ಗಣಪತಿ ರಾಜೇಶ್ವರ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ರೇವಣಸಿದ್ದಪ್ಪ ಬುಳ್ಳಾ ನಿರೂಪಿಸಿದರು. ಉಪಾಧ್ಯಕ್ಷ ಶರಣಬಸಪ್ಪ ಪಾಟೀಲ ವಂದಿಸಿದರು.