

ಬೀದರ್: ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ವಿಶ್ವವಿದ್ಯಾಲಯಗಳ ಸ್ನಾತಕ ಹಾಗೂ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಉಚಿತ ತರಬೇತಿ ನೀಡಲು ನಿರ್ಧರಿಸಿದೆ. ತರಬೇತಿಗಾಗಿ ಅ.26ರಂದು ದೇಶದ 15 ರಾಜ್ಯಗಳ 100 ಕೇಂದ್ರಗಳಲ್ಲಿ ಅರ್ಹತಾ ಪರೀಕ್ಷೆ ನಡೆಯಲಿದೆ ಎಂದು ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದ್ದಾರೆ.
12ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಪಾಸಾದ-ಓದುತ್ತಿರುವ, ಸ್ನಾತಕ ಹಾಗೂ ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾದವರು ಸಾಮಾನ್ಯ ಪ್ರವೇಶ ಪರೀಕ್ಷೆಗಳ ತರಬೇತಿಗೆ ಅರ್ಹರು. ಶಾಹೀನ್ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ನವೆಂಬರ್ನಿಂದ ಸ್ನಾತಕ ಹಾಗೂ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಆನ್ ಲೈನ್ ತರಬೇತಿ ಆರಂಭವಾಗಲಿದೆ. ಸ್ನಾತಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಆಫ್ ಲೈನ್ ತರಬೇತಿ ಮಾರ್ಚ್, ಏಪ್ರಿಲ್ ನಲ್ಲಿ, ಸ್ನಾತಕೋತ್ತರ ತರಬೇತಿ ಜನವರಿ- ಫೆಬ್ರವರಿಯಲ್ಲಿ ಶುರುವಾಗಲಿವೆ ಎಂದು ವಿವರಿಸಿದ್ದಾರೆ.
ಆಫ್ ಲೈನ್ ತರಬೇತಿ ಊಟ, ವಸತಿಸಹಿತ 40 ದಿನ ಇರಲಿದೆ. ಆಸಕ್ತರು ಅ.22ರೊಳಗೆ ವೆಬ್ ಸೈಟ್ www.shaheengroup.org/cuet ನಲ್ಲಿ ಹೆಸರು ನೋಂದಾಯಿಸಬಹುದು. ಮಾಹಿತಿಗೆ ಮೊ. 85498 97767ಗೆ ಸಂಪರ್ಕಿಸಬಹುದು. ಕೇಂದ್ರೀಯ ಸೇರಿ ದೇಶದಲ್ಲಿ ಸುಮಾರು 200 ವಿಶ್ವವಿದ್ಯಾಲಯಗಳಿವೆ. ಸರ್ಕಾರದ ವಿವಿಗಳಲ್ಲಿ ಬಹು ಬೇಡಿಕೆಯ ವಿವಿಧ ಕೋಸ್೯, ಗುಣಮಟ್ಟದ ಶಿಕ್ಷಣ, ಉತ್ತಮ ಶೈಕ್ಷಣಿಕ ವಾತಾವರಣ ಹಾಗೂ ಅತ್ಯಂತ ಕಡಿಮೆ ಶುಲ್ಕ ಇದೆ. ಹೀಗಾಗಿ ವಿವಿ ಸಾಮಾನ್ಯ ಪ್ರವೇಶ ಪರೀಕ್ಷೆ ಕುರಿತು ಜಾಗೃತಿ ಮೂಡಿಸಲು ಹಾಗೂ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿದ್ಯಾರ್ಥಿಗಳಿಗೆ ವಿವಿ ಸ್ನಾತಕ ಹಾಗೂ ಸ್ನಾತಕೋತ್ತರ ಕೋಸ್೯ಗಳಲ್ಲಿ ಪ್ರವೇಶಕ್ಕೆ ನೆರವಾಗಲು ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.