

ಚಿಟಗುಪ್ಪ: ಶ್ರದ್ಧಾ ಭಕ್ತಿಯಿಂದ ಪೂಜಿಸಿದ್ದಲ್ಲಿ ಬೇಡಿದ ವರವ ಕರುಣಿಸುವ ಮಹಾತಾಯಿ ಬಾಲಮ್ಮ ದೇವಿ ಮಹಿಮೆ ಅಪಾರವಾಗಿದೆ ಎಂದು ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷೆ ಪ್ರೇಮಾ ರಾಜಶೇಖರ ಪಾಟೀಲ್ ಹೇಳಿದರು.
ಮನ್ನಾಎಖೇಳ್ಳಿಯಲ್ಲಿ ಬಾಲಮ್ಮದೇವಿ 24ನೇ ಜಾತ್ರೆ, ನಾಡಹಬ್ಬ ದಸರಾ ಮಹೋತ್ಸವ ಹಾಗೂ ಶ್ರೀ ಮಹಾಶಕ್ತಿ ದರ್ಶನ ಪ್ರವಚನಕ್ಕೆ ಚಾಲನೆ ನೀಡಿದ ಅವರು, ಬಾಲಮ್ಮ ತಾಯಿ ಕಷ್ಟಗಳಿಂದ ಪಾರುಮಾಡುವ ಕರುಣಾಮಯಿ ಎಂಬುದಕ್ಕೆ ನೆರೆದಿರುವ ಅಪಾರ ಭಕ್ತ ಸಮೂಹವೇ ಸಾಕ್ಷಿ. ಈ ಕ್ಷೇತ್ರದಿಂದ ನಮ್ಮ ಪಾಟೀಲ್ ಪರಿವಾರದ ರಾಜಕೀಯ ಪಯಣ ಆರಂಭವಾಗಿದೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸ ನಮ್ಮ ಮೇಲೆ ಸದಾ ಇದೆ ಎಂದರು.
ಯುವ ಮುಖಂಡ ರುದ್ರಮ್ ಪಾಟೀಲ್ ಮಾತನಾಡಿ, ಈ ಭಾಗದ ಜತೆಗೆ ಅಜ್ಜ ದಿ.ಬಸವರಾಜ ಪಾಟೀಲ್ ಕಾಲದಿಂದಲೂ ಒಳ್ಳೆಯ ಸಂಬಂಧವಿದೆ. ಬಾಲಮ್ಮ ದೇವಸ್ಥಾನಕ್ಕೆ ದೊಡ್ಡಪ್ಪ ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್ 4 ಲಕ್ಷ ರೂ. ಹಾಗೂ ತಂದೆ ಎಂಎಲ್ಸಿ ಭೀಮರಾವ ಪಾಟೀಲ್ 5 ಲಕ್ಷ ರೂ. ಒದಗಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನೀತಾ ಸಂತೋಷ ರಾಸೂರ ಮಾತನಾಡಿ, ಬಾಲಮ್ಮದೇವಿ ಮಂದಿರ ಸೇವೆ ಸಲ್ಲಿಸುತ್ತ ಬಂದಿದ್ದು, ಮುಂದೆಯೂ ದೇಗುಲದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಖೇಳಗಿ ವಿರಕ್ತ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಅಧ್ಯಾತ್ಮ ಚಿಂತನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ಶಾಂತಿ, ಸಮಾಧಾನ ಸಿಗುತ್ತದೆ. ವಿದೇಶಿ ಸಂಸ್ಕೃತಿಗೆ ಮಾರು ಹೋಗಿರುವ ಯುವ ಸಮೂಹಕ್ಕೆ ಅಧ್ಯಾತ್ಮ ಸಂಸ್ಕಾರ ನೀಡುವ ಅಗತ್ಯವಿದೆ ಎಂದರು.
ಶ್ರೀ ಡಾ.ರಾಜಶೇಖರ ಸ್ವಾಮೀಜಿ ಗೋರ್ಟಾ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಅಗಸಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಣ್ಣ ವರವಟ್ಟಿ, ಮಂದಿರದ ಅಧ್ಯಕ್ಷ ಹಣಮಂತರಾವ ಮರಕುಂದಾ, ಉಪಾಧ್ಯಕ್ಷ ಆನಂದ, ಮಹಾಲಕ್ಷ್ಮೀ ಪಾಟೀಲ್, ನವಲಿಂಗ ಪಾಟೀಲ್, ಗೀತಾ ಚಿದ್ರಿ, ಶಂಕರರಾವ ಜ್ಯೋತಗೊಂಡ, ಶಿವಕುಮಾರ ಜುನ್ನಾ, ಸಂತೋಷ ಕಮಲಪುರ, ಶಿವರಾಜ ಮನ್ನಳ್ಳಿ ಇತರರಿದ್ದರು.
ಜಾತ್ರೋತ್ಸವ ಆರಂಭ
ಮನ್ನಾಎಖೇಳ್ಳಿಯ ಶ್ರೀ ಬಾಲಮ್ಮದೇವಿ ಮಂದಿರದ ಜಾತ್ರೆ ಮತ್ತು ನಾಡಹಬ್ಬ ದಸರಾ ಮಹೋತ್ಸವ ಬೇಮಳಖೇಡದ ಶ್ರೀ ಡಾ.ರಾಜಶೇಖರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುರುವಾರ ಶುರುವಾಗಿದ್ದು, ಅ.11ರವರೆಗೆ ನಡೆಯಲಿದೆ. 10ರವರೆಗೆ ನಿತ್ಯ ರಾತ್ರಿ 8ಕ್ಕೆ ಪೂಜ್ಯರು ಮಹಾಶಕ್ತಿ ದರ್ಶನ ಪ್ರವಚನ ನೀಡುವರು. ನವಲಿಂಗ ಪಾಟೀಲ್ ತಬಲಾ ಸಾಥ್, ರೇವಣಸಿದ್ಧಯ್ಯ ಸ್ವಾಮಿ ಸಂಗೀತ ಸೇವೆ ಸಲ್ಲಿಸಲಿದ್ದಾರೆ. ಭಾನುವಾರ ರಾತ್ರಿ 10ಕ್ಕೆ ಹೇಮರಡ್ಡಿ ಮಲ್ಲಮ್ಮ ಸಂಘದಿಂದ ಕೋಲಾಟ, 8ರಂದು ಬೆಳಗ್ಗೆ 10ಕ್ಕೆ ಕುಂಕುಮಾರ್ಚನೆ, 9ರಂದು ಜಾನಪದ ನೃತ್ಯ ಮತ್ತು ರಸಮಂಜರಿ, 10ರಂದು ರಾತ್ರಿ 8ಕ್ಕೆ ಸಮಾರೋಪ ಕಾರ್ಯಕ್ರಮವಿದೆ. 11ರಂದು ಬೆಳಗ್ಗೆ ಬಾಲ್ಲಮ್ಮ ದೇವಿಗೆ ವಿಶೇಷ ಅಭಿಷೇಕ ನಂತರ ಪ್ರಸಾದ ವಿತರಣೆ, ರಾತ್ರಿ 8ಕ್ಕೆ ಪಲ್ಲಕ್ಕಿ ಉತ್ಸವ ಜರುಗಲಿದೆ.