ಮನರಂಜಿಸಿದ ಏಕ್ ಶಾಮ್ ಲತಾಜಿ ಕೆ ನಾಮ್

sangeet
Published on

ಬೀದರ್: ಬೀದರ್ ಸಂಗೀತ ಕಲಾ ಮಂಡಳದಿಂದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ, ಭಾರತರತ್ನ ಲತಾ ಮಂಗೇಶ್ಕರ್ ಅವರ 95ನೇ ಜನ್ಮದಿನೋತ್ಸವ ನಡೆಯಿತು. ಈ ನಿಮಿತ್ತ ಸಂಘಟಿಸಿದ್ದ `ಏಕ್ ಶಾಮ್ ಲತಾಜಿ ಕೆ ನಾಮ್' ಸಂಗೀತ ಸಂಜೆ ಕೇಳುಗರ ಮನ ತಣಿಸಿತು.
ಸ್ಥಳೀಯ ಕಲಾವಿದರಾದ ಆಬೀದ್ ಅಲಿ ಖಾನ್, ಮಹೇಶ್ವರಿ ಪಾಂಚಾಳ, ಗುರುದೇವ, ಪ್ರಿಯಾಂಕಾ ಗುರುದೇವ, ಶಿವಾನಿ ಸ್ವಾಮಿ ಹಾಡಿದಂಥ ಹಾಡುಗಳು ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು. ಲತಾ ಮಂಗೇಶ್ಕರ್ ಹಿಟ್ ಹಾಡುಗಳಲ್ಲದೆ ಕಿಶೋರಕುಮಾರ್, ಮಹ್ಮದ್ ರಫಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಮೊದಲಾದವರ ಹಾಡುಗಳನ್ನು ಸಹ ಹಾಡಿದರು.
ಸಮಧುರ ಕಂಠದ ಮೂಲಕ ಮಹೇಶ್ವರಿ ಪಾಂಚಾಳ, ಶಿವಾನಿ ಸ್ವಾಮಿ ಹಾಗೂ ಪ್ರಿಯಾಂಕಾ ಗುರುದೇವ ಅವರು ಲತಾಜಿಯವರ ಹಲವು ಹಾಡುಗಳನ್ನು ಹಾಡಿ ಗಮನ ಸೆಳೆದರು. ಆಬೀದ್ ಅಲಿ ಖಾನ್ ಹಾಡಿದ ಹಾಡುಗಳು ಕಿಶೋರ್, ರಫಿಯನ್ನು ಸ್ಮರಿಸುವಂತೆ ಮಾಡಿದವು. ಮೂರು ಗಂಟೆ ಕಾರ್ಯಕ್ರಮದಲ್ಲಿ ಸಭಿಕರು ಸಂಗೀತ ಲೋಕದಲ್ಲಿ ತೇಲಾಡಿದರು.
ತಹಸೀಲ್ದಾರ್ ಡಿ.ಜಿ. ಮಹತ್ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ನಿರಂತರ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು ವಿಶೇಷ. ಸಂಗೀತ ಕಲಾ ಮಂಡಳ ಸಂಗೀತಾಸಕ್ತರ ಮನತಣಿಸುವ ಜತೆಗೆ ಕಲಾವಿದರಿಗೆ ಉತ್ತಮ ವೇದಿಕೆ ಸಹ ಒದಗಿಸುತ್ತಿದೆ ಎಂದು ಕೊಂಡಾಡಿದರು. ಸ್ವತಃ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಮೂರ್ನಾಲ್ಕು ಹಾಡು ಹಾಡಿದ ಮಹತ್ ಎಲ್ಲರಿಗೂ ರಂಜಿಸಿದರು.
ಬೀದರ್ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್, ರಾಜೇಂದ್ರಸಿಂಗ್ ಪವಾರ್, ಡಾ.ರಾಜಶೇಖರ ಪಾಟೀಲ್, ಡಾ.ವಿ.ವಿ. ನಾಗರಾಜ್, ಸದಾನಂದ ಜೋಶಿ, ಮಂಗಲಾ ಭಾಗವತ್, ಟಿ.ಎಸ್. ರಶ್ಮಿ, ವಿಜಯಕುಮಾರ ಸೋನಾರೆ, ರಾಜಕುಮಾರ ಹೆಬ್ಬಾಳೆ, ರಮೇಶ ಗೋಯಲ್, ಎಸ್.ಆರ್. ಸಂಗಮಕರ್ ಇತರರಿದ್ದರು. ಮಹ್ಮದ್ ಗೌಸ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net