ಸ್ವಚ್ಛ-ಸುಂದರ ಬೀದರ್ ಗೆ ಕೈಜೋಡಿಸಿ

Post office
Published on

ಬೀದರ್: ಬೀದರ್ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಶಾಂತ ದೊಡ್ಡಿ ಹೇಳಿದರು.
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸ್ವಚ್ಛತೆಯೇ ಸೇವೆ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಅಂಚೆ ಇಲಾಖೆಯಿಂದ ಶ್ರಮದಾನ, ಸಸಿ ನೆಡುವಿಕೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಇಲಾಖೆ ತನ್ನ ಸೇವೆಗಳ ಜತೆಗೆ ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯವಾಗಿದೆ ಎಂದರು.
ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟೆ ಮಾತನಾಡಿ, ಅಭಿಯಾನದ ಪ್ರಯುಕ್ತ ಅಂಚೆ ಇಲಾಖೆಯಿಂದ ಪಥ ಸಂಚಲನ ನಡೆಸಿ ಸಾರ್ವಜನಿಕರಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಲಾಗಿದೆ. ಅಂಚೆ ಕಚೇರಿಗಳ ಸ್ವಚ್ಛತೆ, ಶಾಲಾ, ಕಾಲೇಜು ಆವರಣದಲ್ಲಿ ಸಸಿ ನೆಡುವಿಕೆ ಮೊದಲಾದ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅಂಚೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ಮಾತನಾಡಿ, ಎಲ್ಲ ವರ್ಗದವರಿಗೆ ಅನುಕೂಲವಾಗುವಂತಹ ಯೋಜನೆಗಳು ಅಂಚೆ ಇಲಾಖೆಯಲ್ಲಿ ಇವೆ. ಪೌರ ಕಾರ್ಮಿಕರು ಸಣ್ಣ ಉಳಿತಾಯ, ಜೀವ ವಿಮೆ ಮತ್ತಿತರ ಯೋಜನೆಗಳ ಲಾಭ ಪಡೆಯಬೇಕು ಎಂದು ಹೇಳಿದರು.
ಉತ್ತಮ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಉಪ ಅಂಚೆ ಅಧೀಕ್ಷಕ ಅಕ್ಷಯ್ ಕಾಮತ್, ಅಂಚೆ ಪಾಲಕ ರಾಜೇಂದ್ರ ವಗ್ಗೆ ಮತ್ತಿತರರು ಉಪಸ್ಥಿತರಿದ್ದರು. ಕಲ್ಲಪ್ಪ ಕೋಣೆ ನಿರೂಪಿಸಿದರು. ಚಿದಾನಂದ ಕಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net