ಅರ್ಹರಿಗೆ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಿ

1aurad1
Published on

ಔರಾದ್: ಕಾರ್ಮಿಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿದ ಎಲ್ಲ ಯೋಜನೆಗಳನ್ನು ಅರ್ಹರಿಗೆ ಸಮರ್ಪಕವಾಗಿ ತಲುಪಿಸಬೇಕೆಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಪಟ್ಟಣದಲ್ಲಿರುವ ಶಾಸಕರ ಕಚೇರಿಯಲ್ಲಿ ಕಾರ್ಮಿಕ ಇಲಾಖೆ ಏರ್ಪಡಿಸಿದ್ದ ನ್ಯೂಟ್ರಿಷನ್ ಹಾಗೂ ಆರ್ಪಿಎಲ್ ಕಿಟ್ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಸುಮಾರು 4000 ಕಾರ್ಮಿಕರಿದ್ದಾರೆ. ಅವರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದ್ದರಿಂದ ಸೌಲಭ್ಯ ಸಿಗುತ್ತಿರಲಿಲ್ಲ. ಹೀಗಾಗಿ ತರಬೇತಿ ಆಯೋಜಿಸಲಾಗಿದೆ ಎಂದರು.
ಯಾವೊಬ್ಬ ಕಾರ್ಮಿಕನ ಬಳಿಯೂ ವಿಮೆ ಸೌಲಭ್ಯ ಇಲ್ಲ. ಏನಾದರೂ ಅನಾಹುತವಾದರೆ ಅವರ ಕುಟುಂಬ ರಸ್ತೆಗೆ ಬರಬೇಕಾಗುತ್ತದೆ. ಹೀಗಾಗಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಕಾರ್ಮಿಕರಿಗಾಗಿ ವಿಶೇಷ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕರ ಏಳಿಗೆಯ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಅವರಂತೆ ಕಾರ್ಮಿಕರ ಅಭಿವೃದ್ಧಿ ಆಗಬೇಕೆಂದು ನಾನು ನಿರಂತರ ಕೆಲಸ ಮಾಡುತ್ತಿರುವೆ ಎಂದರು.
ಕಾರ್ಮಿಕರ ಹಿತರಕ್ಷಣೆಗೆ ಪಿಂಚಣಿ, ವೈದ್ಯಕೀಯ ನೆರವು, ಕಿಟ್ ವಿತರಣೆ, ಅವರ ಮಕ್ಕಳಿಗೆ ವಿದ್ಯಾರ್ಥಿವೇತನ, ವಿವಾಹ ಸಹಾಯಧನ ಹೀಗೆ ಹತ್ತು ಹಲವು ಯೋಜನೆಗಳಿದ್ದು, ಇವುಗಳ ಲಾಭ ಕಾರ್ಮಿಕರಿಗೆ ಸಿಗುವಂತೆ ಅಕಾರಿಗಳು ನೋಡಿಕೊಳ್ಳಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸರಬಾಯಿ ಘೂಳೆ, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ವೃತ್ತ ಕಾರ್ಮಿಕ ನಿರೀಕ್ಷಕ ರಾಹುಲ್ ರತ್ನಾಕರ್, ಮುಖಂಡ ಕೇರಬಾ ಪವಾರ್ ಇತರರಿದ್ದರು. ಆರ್ಪಿಎಲ್ ವ್ಯವಸ್ಥಾಪಕ ವೀರಭದ್ರಪ್ಪ ಮಾಶಾಲ್ ಇಲಾಖೆ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಶಾಸಕರು ಕಾರ್ಮಿಕರಿಗೆ ನ್ಯೂಟ್ರಿಷನ್ ಕಿಟ್ಗಳನ್ನು ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net