

ಬೀದರ್: ಬಂಜಾರಾ ಸಮುದಾಯಕ್ಕೆ ಶತಮಾನಗಳ ಇತಿಹಾಸವಿದೆ. ಬಂಜಾರಾ ನೃತ್ಯ ಕೇವಲ ಸರ್ಕಾರಿ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಸಿಗಬೇಕಾಗಿದೆ ಎಂದು ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್. ಗೋವಿಂದಸ್ವಾಮಿ ಹೇಳಿದರು.
ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಡಿ ನಗರದಲ್ಲಿ ಹಮ್ಮಿಕೊಂಡಿದ್ದ ಬಂಜಾರಾ ಸಾಂಪ್ರದಾಯಿಕ ನೃತ್ಯ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಬಂಜಾರಾ ಅತ್ಯಂತ ಶ್ರೀಮಂತ ಸಂಸ್ಕೃತಿ ಹೊಂದಿರುವ ನೃತ್ಯ ಪ್ರಕಾರವಾಗಿದೆ. ಶ್ರೀ ಕೃಷ್ಣನಿಗೆ ಕೊಳಲು ತಯಾರಿಸಿಕೊಟ್ಟಿದ್ದು, ನೃತ್ಯ ಸಂಸ್ಕೃತಿಗೆ ನಾಂದಿ ಹಾಡಿದ್ದು ಹೀಗೆ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಸಮುದಾಯಕ್ಕೆ ಜನಮನ್ನಣೆ ಸಿಗುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸುವಲ್ಲಿ ಬಂಜಾರಾ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಅನಾದಿ ಕಾಲದಿಂದಲೂ ಲಂಬಾಣಿ ನೃತ್ಯ ನಡೆದುಕೊಂಡು ಬಂದಿದೆ. ಡಾ.ಗೋವಿಂದಸ್ವಾಮಿ ಅವರು ಬಂಜಾರಾ ಭಾಷಾ ನಿಘಂಟು ಪ್ರಕಟಿಸುವ ವಿಷಯವನ್ನು ತಮ್ಮ ಅಜೆಂಡಾದಲ್ಲಿ ಇಟ್ಟುಕೊಂಡಿದ್ದು ಶ್ಲಾಘನೀಯ ಎಂದು ಹೇಳಿದರು.
ಸಮಾಜದ ಹಿರಿಯ ಮುಖಂಡ ಬಾಬು ಹೊನ್ನಾನಾಯಕ ಮಾತನಾಡಿ, ನಶಿಸುತ್ತಿರುವ ಬಂಜಾರಾ ನೃತ್ಯ ಸಂಸ್ಕೃತಿಯನ್ನು ತರಬೇತಿ ಶಿಬಿರದ ಮೂಲಕ ಮತ್ತೆ ಸಮಾಜದ ಮುಖ್ಯವಾಹಿನಿಗೆ ತರುವ ಯತ್ನ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವರಾಜ ಪವಾರ್ ಮಾತನಾಡಿದರು. ಶಶಿ ರಾಠೋಡ್, ಆಶಾ ರಾಠೋಡ್, ಮೀರಾಬಾಯಿ, ಭಾರತಿಬಾಯಿ, ಅಣ್ಣಾರಾವ ರಾಠೋಡ್, ಶಂಕರರಾವ ಹೊನ್ನಾ, ಡಾ.ಸಂಜೀವಕುಮಾರ ಜುಮ್ಮಾ, ವಸಂತ ಹುಣಸನಾಳೆ, ಶಿವಶರಣಪ್ಪ ಗಣೇಶಪುರ, ಪ್ರಕಾಶ ಕನ್ನಾಳೆ, ಮಹಾರುದ್ರ ಡಾಕುಳಗೆ, ಶಿವಶರಣಪ್ಪ ವಲ್ಲೇಪುರೆ ಇತರರಿದ್ದರು.
ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಎಸ್.ಬಿ. ಕುಚಬಾಳ ನಿರೂಪಣೆ ಮಾಡಿದರು. ನಿಜಲಿಂಗಪ್ಪ ತಗಾರೆ ವಂದಿಸಿದರು.