

ಔರಾದ್: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜನರಲ್ಲಿ ಆರ್ಥಿಕ ಸ್ವಾವಲಂಬನೆ ಮೂಡಿಸಲು ಸಹಕಾರಿಯಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಹೇಳಿದರು.
ಸಂತಪುರದಲ್ಲಿ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿದ ಅವರು, ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಧರ್ಮಸ್ಥಳ ಸಂಸ್ಥೆ ಭರವಸೆಯ ಬೆಳಕಾಗಿದೆ ಎಂದರು.
ಧರ್ಮಸ್ಥಳ ಯೋಜನೆ ಅನೇಕ ಸೌಲಭ್ಯಗಳನ್ನು ಗ್ರಾಮೀಣ ಮಹಿಳೆಯರ ಮನೆಗೆ ತಲುಪಿಸಿ ಅವರ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸುತ್ತಿದೆ. ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರನ್ನು ಜಾಗೃತಗೊಳಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವು ನೀಡುತ್ತಿದೆ. ತಾಲೂಕಿನಲ್ಲಿ ಕೆರೆ ನಿರ್ಮಾಣ, ದೇವಾಲಯಗಳ ಜೀರ್ಣೋದ್ಧಾರ, ಅತಿಥಿ ಶಿಕ್ಷಕರ ನೇಮಕ, ಶಿಷ್ಯವೇತನ, ಕ್ಷೀರಕ್ರಾಂತಿ, ಮನೆ ನಿರ್ಮಾಣದಂಥ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಡಾ.ಶಾಲಿವಾನ್ ಉದಗೀರೆ ಮಾತನಾಡಿ, ಶ್ರೀ ಡಾ.ವೀರೇಂದ್ರ ಹೆಗ್ಗಡೆ ಸ್ಥಾಪಿಸಿದ ಗ್ರಾಮಾಭಿವೃದ್ಧಿ ಯೋಜನೆ ಈ ಭಾಗದವರ ಪಾಲಿಗೆ ವರವಾಗಿದೆ. ಯೋಜನೆ ಸದುಪಯೋಗ ಪಡೆದು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಕೋರಿದರು.
ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಒಕ್ಕೂಟ ಪದಾಧಿಕಾರಿಗಳಿಗೆ ಯಾವ ತೊಂದರೆಗಳಿದ್ದರೂ ನೇರವಾಗಿ ಆಯಾ ತಾಲೂಕಿನ ಯೋಜನೆ ಅಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದರು.
ಬ್ಯಾಂಕ್ ಆಫ್ ಬರೋಡಾ ಬೀದರ್ ಶಾಖೆ ಅಧಿಕಾರಿ ಪ್ರಿಯಾಂಕಾ, ಎಸ್.ಬಿಐ ಔರಾದ್ ಶಾಖೆ ವ್ಯವಸ್ಥಾಪಕ ಮಹ್ಮದ್ ಅಮೀರ್ ದಿಯಾ , ವೇದಿಕೆ ಸದಸ್ಯ ಮಲ್ಲಪ್ಪ ಗೌಡ ಮಾತನಾಡಿದರು.
ತಾಲೂಕು ಯೋಜನಾ ಅಧಿಕಾರಿ ರಾಘವೇಂದ್ರ ಗೌಡ, ಎಸ್ಬಿಐ ಸಂತಪುರ ಶಾಖೆ ವ್ಯವಸ್ಥಾಪಕ ಸುರೇಶ, ಸುನೀಲ, ಉಮೇಶ, ವಿಲಾಸ ಪೂಜಾರಿ, ಮಲ್ಲಿಕಾರ್ಜುನ, ಲೋಕೇಶ, ಬೀರಪ್ಪ, ಮಹಾದೇವ, ಬಸವರಾಜ, ನಿತೀಶ್, ಸಂಗೀತಾ, ಸುಪ್ರಿಯಾ, ನಾಜ್ಮೀನ್, ಜ್ಯೋತಿ, ಕಾರ್ತಿಕ್, ಪವನ್ ಇತರರಿದ್ದರು. ಅನೀಲ ದಾವಣಿ ನಿರೂಪಣೆ ಮಾಡಿದರು.