

ಬೀದರ್: ನಗರದಲ್ಲಿ ನೂರು ಎಕರೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಮಾರುಕಟ್ಟೆ ಸ್ಥಾಪಿಸಬೇಕು ಎಂದು ಗಾಂಧಿಗಂಜ್‍ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.
ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಅವರ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ನಿಯೋಗದಲ್ಲಿ ಎ.ಪಿ.ಎಂ.ಸಿ. ಕಾರ್ಯದರ್ಶಿ ಹಾಗೂ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಹೊಸ ಮಾರುಕಟ್ಟೆ ಸ್ಥಾಪನೆಯ ಅಗತ್ಯತೆಯನ್ನು ಮನವರಿಕೆ ಮಾಡಿದರು.
10 ವರ್ಷಗಳಿಂದ ಹೊಸ ಮಾರುಕಟ್ಟೆ ಸ್ಥಾಪನೆಗೆ ಬೇಡಿಕೆ ಮಂಡಿಸುತ್ತಲೇ ಬರಲಾಗಿದೆ. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಸವರಾಜ ಧನ್ನೂರ ಹೇಳಿದರು.
ಸದ್ಯ ಮಾರುಕಟ್ಟೆಗೆ ಹಿಂಗಾರು ಹಂಗಾಮಿನ ಉದ್ದು, ಹೆಸರು, ಸೋಯಾಬೀನ್ ಆವಕ ಶುರುವಾಗಿದೆ. ಆಹಾರ ಧಾನ್ಯ ಹೊತ್ತು ಮಾರುಕಟ್ಟೆಗೆ ಬರುವ ಹಾಗೂ ಹೊರ ಹೋಗುವ ವಾಹನಗಳ ದಟ್ಟಣೆಯಿಂದಾಗಿ ಮಾರುಕಟ್ಟೆಯಲ್ಲಿ ನಡೆದಾಡಲು ಸಹ ಆಗದಂತಹ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಗಮನ ಸೆಳೆದರು.
ಬರುವ ದಿನಗಳಲ್ಲಿ ಆಹಾರ ಧಾನ್ಯಗಳ ಆವಕ ಇನ್ನೂ ಹೆಚ್ಚಾಗಲಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ರೈತರು ಹಾಗೂ ವ್ಯಾಪಾರಿಗಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಲಿದೆ ಎಂದು ತಿಳಿಸಿದರು.
ಮಾರುಕಟ್ಟೆಯಲ್ಲಿ ಎಲ್ಲೆಡೆ ಬೀದಿ ದೀಪ, ಸಿ.ಸಿ. ಟಿವಿ ಕ್ಯಾಮೆರಾಗಳು ಇಲ್ಲ. ಕಸ ವಿಲೇವಾರಿ ಹಾಗೂ ಚರಂಡಿ ಸ್ವಚ್ಛತೆಯೂ ಆಗುತ್ತಿಲ್ಲ ಎಂದು ದೂರಿದರು.
ಕೂಡಲೇ ಮಾರುಕಟ್ಟೆಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ರೈತರು ಹಾಗೂ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ನೂತನ ಮಾರುಕಟ್ಟೆ ಸ್ಥಾಪನೆ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಮಾರುಕಟ್ಟೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಸೋಸಿಯೇಷನ್ ಉಪಾಧ್ಯಕ್ಷ ನಾಗಶೆಟ್ಟೆಪ್ಪ ದಾಡಗಿ, ಕಾರ್ಯದರ್ಶಿ ಭಗವಂತ ಔದತಪುರ, ಪದಾಧಿಕಾರಿಗಳಾದ ನಾಗಶೆಟ್ಟಿ ಕಾರಾಮುಂಗಿ, ಓಂ ಬಾಲಾಜಿ, ನರಸಿಂಗ್ ಸಿಂಧೆ, ವಿಶ್ವನಾಥ ಕಾಜಿ, ಗೋವಿಂದರಾವ್ ನೀಲಮನಳ್ಳಿ ಮತ್ತಿತರರು ಇದ್ದರು.