ಐದು ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ

NSSK GB Meeting
Published on

ಬೀದರ್: ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್ನೆಸ್ಸೆಸ್ಕೆ) 2024-25ರ ಹಂಗಾಮಿನ ಕಬ್ಬು ನುರಿಸುವ ಕಾರ್ಯ ಸರ್ಕಾರದ ಆದೇಶದಂತೆ ನವೆಂಬರ್ನಲ್ಲಿ ಪ್ರಾರಂಭಿಸಲಿದ್ದು, ಐದು ಲಕ್ಷ ಮೆ.ಟನ್ ಕ್ರಷಿಂಗ್ ಗುರಿ ಹೊಂದಲಾಗಿದೆ ಎಂದು ಅಧ್ಯಕ್ಷ ಡಿ.ಕೆ. ಸಿದ್ರಾಮ ಹೇಳಿದರು.
ಜನವಾಡ ಸಮೀಪದ ಕಾರ್ಖಾನೆಯಲ್ಲಿ ಬುಧವಾರ ಆಯೋಜಿಸಿದ್ದ 39ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸದಸ್ಯ ರೈತರು ಕಾಖರ್ಾನೆಗೆ ಕಬ್ಬು ಸಾಗಿಸಿ ಸಹಕಾರ ನೀಡಬೇಕು ಎಂದು ಕೋರಿದರು. ಆರ್ಥಿಕವಾಗಿ ಸದೃಢಗೊಳಿಸಲು ಕಾರ್ಖಾನೆಯಲ್ಲಿ ಖಾಲಿ ಇರುವ 100 ಎಕರೆ ಜಾಗದಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಲು ಖಾಸಗಿ ಕಂಪನಿಯವರಿಗೆ ಲೀಜ್ ನೀಡಲು ಉದ್ದೇಶಿಸಲಾಗಿದೆ. ಎಥೆನಾಲ್ ಘಟಕ ಶೀಘ್ರ ಆರಂಭಿಸುವುದಾಗಿ ತಿಳಿಸಿದರು.
ಡಿಸಿಸಿ ಬ್ಯಾಂಕ್ ಸಾಲ ಪ್ರತಿವರ್ಷ 20 ಕೋಟಿ ರೂ. ಕಟ್ಟಲಾಗುವುದು. ಬ್ಯಾಂಕ್ ನೀಡಿರುವ ನೋಟಿಸ್ ಹಿಂಪಡೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ರೈತರ ಹಿತದೃಷ್ಟಿಯಿಂದ ಮಧ್ಯಸ್ಥಿಕೆ ವಹಿಸಿ ಕಾರ್ಖಾನೆ ಹಾಗೂ ಬ್ಯಾಂಕ್ನವರ ಸಭೆ ಕರೆದು ಕಬ್ಬು ನುರಿಸುವ ಹಂಗಾಮಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಉಪಾಧ್ಯಕ್ಷ ಬಾಲಾಜಿ ಚವ್ಹಾಣ್, ನಿರ್ದೇಶಕರಾದ ಉಮಾಕಾಂತ ನಾಗಮಾರಪಳ್ಳಿ, ಝರಿಯಪ್ಪ ಮಮದಾಪುರೆ, ರಾಜಕುಮಾರ ಕರಂಜಿ, ಶಿವಬಸಪ್ಪ ಚೆನ್ನಮಲ್ಲೆ, ಸಿದ್ರಾಮ ವಾಘಮಾರೆ, ವಿಜಯಕುಮಾರ ಪಿ.ಪಾಟೀಲ್, ಸೀತಾರಾಮ ಖೇಮಾ, ಸಂಗಮೇಶ ಪಾಟೀಲ್, ಶೋಭಾವತಿ ಪಾಟೀಲ್, ಮಲ್ಲಮ್ಮ ಪಾಟೀಲ್, ಶಶಿಕುಮಾರ ಪಾಟೀಲ್, ವೀರಶೆಟ್ಟಿ ಪಟ್ನೆ, ನಾಗರಡ್ಡಿ ಯಾಚೆ, ಕಾನೂನು ಸಲಹೆಗಾರ ಬಿ.ಎಸ್. ಅಪರಂಜಿ ಇತರರಿದ್ದರು. ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ ಪಾಟೀಲ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net