

ಬೀದರ್: ಜಾನಪದ ಹಾಡು, ಜಾತ್ರೆ ಮತ್ತು ಉತ್ಸವಗಳು ಸಮಾಜದಲ್ಲಿ ಭಾವೈಕ್ಯ ಸಂದೇಶ ಸಾರುತ್ತವೆ. ಜಾನಪದ ಉಳಿದರೆ ಮಾತ್ರ ಮುಂದಿನ ಪೀಳಿಗೆಗೆ ಅರಿಯಲು ಸಾಧ್ಯ ಎಂದು ಬೀದರ್ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ್ ಹೇಳಿದರು.
ಕರ್ನಾಟಕ ಜಾನಪದ ಪರಿಷತ್, ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕವ ಅಭಿವೃದ್ಧಿ ಟ್ರಸ್ಟ್, ಸಂಸ್ಕೃತಿ ಮಂತ್ರಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ನಾವದಗೇರಿಯ ಶುಕ್ಲತೀರ್ಥ ಮಡಿವಾಳೇಶ್ವರ ಮಂದಿರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಜಾನಪದ ಉತ್ಸವ ಹಾಗೂ ನಮ್ಮೂರು ಜಾನಪದ ಜಾತ್ರೆ ಉದ್ಘಾಟಿಸಿ ಮಾತನಾಡಿ, ನಮ್ಮೆಲ್ಲರ ನಿತ್ಯದ ಜೀವನದಲ್ಲಿ ಜಾನಪದ ಹಾಸುಹೊಕ್ಕಿದೆ. ಜಾನಪದ ಸಂಸ್ಕೃತಿ ಇಲ್ಲದ ಆಚರಣೆ, ವಿಚಾರಗಳು ಅಪೂರ್ಣ. ಇಂದಿನ ಬಹುತೇಕ ದುರ್ಘಟನೆಗಳಿಗೆ ಆಧುನಿಕ ಸಂಸ್ಕೃತಿ ಪ್ರಮುಖ ಕಾರಣ. ಹೀಗಾಗಿ ಪ್ರತಿಯೊಬ್ಬರೂ ಜಾನಪದ ಸಂಸ್ಕೃತಿ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್ ಮಾತನಾಡಿ, ಮಡಿವಾಳೇಶ್ವರ ಮಂದಿರದಲ್ಲಿ ಎಲ್ಲ ಧರ್ಮದ ಜನರು ಪಾಲ್ಗೊಂಡು ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ದೇವಸ್ಥಾನದ ಅಭಿವೃದ್ಧಿಗೆ ನೆರವು ನೀಡುವುದಾಗಿ ಭರವಸೆ ನೀಡಿದರು.
ಜೈಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ, ಶ್ರೀ ಶಂಕರಲಿಂಗ ಸ್ವಾಮೀಜಿ ಸೊಂತ, ನಗರಸಭೆ ಸದಸ್ಯ ಪ್ರಶಾಂತ ದೊಡ್ಡಿ, ಪ್ರಮುಖರಾದ ಅಶೋಕ ಹೆಬ್ಬಾಳೆ, ಈಶ್ವರಸಿಂಗ್ ಠಾಕೂರ್, ಮಹೇಶ್ವರ ಸ್ವಾಮಿ, ವಿಜಯಕುಮಾರ ಸೋನಾರೆ, ಶುಕ್ಲತೀರ್ಥ ಸೇವಾ ಸಮಿತಿ ಅಧ್ಯಕ್ಷ ಸಂತೋಷ ಕಾಮಣ್ಣ, ಪ್ರಧಾನ ಕಾರ್ಯದರ್ಶಿ ಸಾಯಿನಾಥ ಮಡಿವಾಳ, ಉಪಾಧ್ಯಕ್ಷ ಬಸವರಾಜ ಬಿರಾದಾರ್, ರಾಜಕುಮಾರ ಜಮಾದಾರ್ ಇತರರಿದ್ದರು. ಡಾ.ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು. ಓಂಕಾರ ಬಜಾರೆ ಸ್ವಾಗತಿಸಿದರು. ಎಸ್.ಬಿ. ಕುಚಬಾಳ ನಿರೂಪಣೆ ಮಾಡಿದರು. ಸಂತೋಷ ಕಾಮಣ್ಣ ವಂದಿಸಿದರು.
ಹಿರಿಯ ಕಲಾವಿದರಾದ ಡಾ.ಜೀವನಸಾಬ್ ಬಿನ್ನಾಳ, ಬಸವರಾಜ ಕಟ್ಟಿಮನಿ, ದಾನೇಶ್ವರಿ ಮೇಲಿನಮಠ, ಆಶಾಬಾಯಿ ರಾಠೋಡ್, ಶೇಷಪ್ಪ ಚಿಟ್ಟಾ, ಪವನ್ ನಾಟೇಕರ್, ಸತೀಶ ಅವರನ್ನು ಒಳಗೊಂಡ ತಂಡದ ಡೊಳ್ಳು ಕುಣಿತ ಆಕರ್ಷಕವಾಗಿತ್ತು.