

ಔರಾದ್: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ಮಕ್ಕಳಿಗೆ ಪಾಠದ ಜತೆಗೆ ಸಂಸ್ಕಾರ ಕಲಿಸಬೇಕು. ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡಿ ದೇಶಪ್ರೇಮ ಮೂಡಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಪಟ್ಟಣದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿದ ಅವರು, ಔರಾದ್ ಕ್ಷೇತ್ರದಲ್ಲಿ ಶಿಕ್ಷಣ ರಂಗ ಸಾಕಷ್ಟು ಸುಧಾರಿಸಿದೆ. ಪ್ರತಿವರ್ಷ ಫಲಿತಾಂಶದಲ್ಲಿ ಪ್ರಗತಿ ಕಾಣುತ್ತಿದೆ. ಆದರೆ ಈ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಆಗಿರುವುದಕ್ಕೆ ಬೇಸರವಿದೆ. ಎಲ್ಲ ಶಿಕ್ಷಕರು ಫಲಿತಾಂಶ ಸುಧಾರಣೆಗೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಕ್ರೀಡೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದ್ದು, ಸದ್ಬಳಕೆ ಮಾಡಿಕೊಂಡು ಮಕ್ಕಳು ರಾಜ್ಯಮಟ್ಟದಲ್ಲಿ ಮಿಂಚಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಯತ್ನ ಮಾಡಬೇಕು ಎಂದರು.
ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿರುವ ಶಿಕ್ಷಣದ ಪ್ರಗತಿಗೆ ನಿರಂತರ ಶ್ರಮಿಸುತ್ತಿದ್ದು, ಪ್ರತಿವರ್ಷ ಶಿಕ್ಷಕರು, ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆತ್ಮಬಲ ವೃದ್ಧಿಸುವ ಕೆಲಸ ಮಾಡುತ್ತಿರುವೆ. ಈ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತು ಐಎಎಸ್, ಐಪಿಎಸ್ ನಂಥ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂಬ ಸಂಕಲ್ಪ, ಸದಾಶಯದೊಂದಿಗೆ ಕೆಲಸ ಮಾಡುತ್ತಿದ್ದು, ಶಿಕ್ಷಕರು ಸಹಕರಿಸಬೇಕು ಎಂದು ಕೋರಿದರು.
ಶಿಕ್ಷಣ ಕೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು, ಶಾಲಾ-ಕಾಲೇಜುಗಳ ಪ್ರಗತಿಗೆ ಒತ್ತು ಕೊಟ್ಟಿದ್ದೇನೆ. ಐಟಿಐ, ಡಿಪ್ಲೊಮಾ ಕಾಲೇಜುಗಳನ್ನು ನಿರ್ಮಿಸಲಾಗಿದೆ. ಕಿತ್ತೂರು ರಾಣಿ ಚನ್ನಮ್ಮ, ಡಾ.ಬಿ.ಆರ್. ಅಂಬೇಡ್ಕರ್, ಮುರಾರ್ಜಿ ದೇಸಾಯಿ ವಸತಿ ಶಾಲೆ, ಆದರ್ಶ ವಿದ್ಯಾಲಯ ನಿರ್ಮಿಸಲಾಗುತ್ತಿದೆ. ಶಿಕ್ಷಣಕ್ಕೆ ಸಂಬಂಸಿದಂತೆ ಯಾವುದೇ ಕೆಲಸವಿರಲಿ, ಶಿಕ್ಷಕರು ನನ್ನನ್ನು ನೇರವಾಗಿ ಭೇಟಿಯಾಗಿ ಮಾಡಿಕೊಳ್ಳಬಹುದು ಎಂದರು.
ಔರಾದ್, ಕಮಲನಗರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದೇನೆ. ಬಲ್ಲೂರ್ನಲ್ಲಿ ಸಿಪೆಟ್ ಕೇಂದ್ರ ಮಂಜೂರಾಗಿದ್ದು, ಕೆಲಸ ಆರಂಭಿಸಲಾಗುವುದು. ನಾಗೂರ(ಬಿ)ದಲ್ಲಿ 220 ಕೆವಿ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಕೆಲಸ ನಡೆಯುತ್ತಿದೆ. ಕೆರೆ ತುಂಬುವ ಯೋಜನೆ, ಕಾರಂಜಾ ಜಲಾಶಯದಿಂದ ಔರಾದ ಗೆ ನೀರು ಪೂರೈಸುವ ಯೋಜನೆಗಳು ಅನುದಾನ ಕೊರತೆಯಿಂದಾಗಿ ನಿಂತಿದ್ದು, ಎಲ್ಲ ಕೆಲಸಗಳಿಗೆ ವೇಗ ನೀಡಲಾಗುವುದು ಎಂದು ಹೇಳಿದರು.
ನಾಡಿಗೆ ಅನ್ನ ನೀಡಿ ಕಾಪಾಡುವ ರೈತರು, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ಹಾಗೂ ದೇಶದ ರಕ್ಷಣೆಗೆ ಹೋರಾಡುವ ಸೈನಿಕರನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಶಿಕ್ಷಣ ರಂಗದಲ್ಲಿ ಔರಾದ್ ಕ್ಷೇತ್ರ ಮಾದರಿಯನ್ನಾಗಿ ಮಾಡಲು ನಾನಾ ಯೋಜನೆ ಹಾಕಿಕೊಂಡಿರುವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ,ಸಮಾಜದಲ್ಲಿ ಹೆಚ್ಚು ಗೌರವಕ್ಕೆ ಪಾತ್ರರಾಗುವ ಶಿಕ್ಷಕರನ್ನು ಪ್ರತಿವರ್ಷ ಶಾಸಕ ಪ್ರಭು ಚವ್ಹಾಣ್ ಸನ್ಮಾನಿಸುತ್ತಿರುವುದು ಮಾದರಿ ಕಾರ್ಯ. ಅನಾಥ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಕೊಡಿಸುವುದು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿರುವುದು ಅವರ ಅಪರೂಪದ ಕಾರ್ಯವಾಗಿದೆ ಎಂದರು.
ಬಿಇಒ ಸುಧಾರಾಣಿ ನಾಯಕ್, ಪ್ರಕಾಶ ರಾಠೋಡ್, ಸಂಜಯ ಮೇತ್ರೆ, ಬಲಭೀಮ ಕುಲಕರ್ಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರಡ್ಡಿ ಮಾಲಿಪಾಟೀಲ್, ಪ್ರಮುಖರಾದ ಶಿವಾಜಿರಾವ ಪಾಟೀಲ್ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಪ್ರತೀಕ್ ಚವ್ಹಾಣ್, ಶಾಲಿವಾನ್ ಉದಗೀರೆ, ನಯಿಮೊದ್ದೀನ್, ಸಂತೋಷರಡ್ಡಿ, ಮೆಹಬೂಬ್ ಪಾಟೀಲ್, ಪಂಢರಿ ಆಡೆ, ಬಸವರಾಜ ಪಾಟೀಲ್, ಸಂಜುಕುಮಾರ ಶೆಟಕಾರ, ಶಿವಶರಣಪ್ಪ ವಲ್ಲೆಪುರೆ ಇತರರಿದ್ದರು.
ಕಾರ್ಯಕ್ರಮದಲ್ಲಿ ಔರಾದ್ ಹಾಗೂ ಕಮಲನಗರ ತಾಲೂಕಿನ ಎಲ್ಲ ನಿವೃತ್ತ ಶಿಕ್ಷಕರು, ಮರಣ ಹೊಂದಿದ ಶಿಕ್ಷಕರ ಅವಲಂಬಿತರು ಹಾಗೂ ಎಲ್ಲ ಶಾಲಾ-ಕಾಲೇಜು ಉಪನ್ಯಾಸಕರು ಮತ್ತು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಜಯಿಸಿ ರಾಜ್ಯಕ್ಕೆ ಅರ್ಹತೆ ಪಡೆದ ವಿವಿಧ ಶಾಲೆ ಮಕ್ಕಳನ್ನೂ ಶಾಸಕರು ಸನ್ಮಾನಿಸಿ ಹುರಿದುಂಬಿಸಿದರು.