ಬೀದರ್ ಕೋಟೆ ಮೇಲೆ ಲೋಹದ ಹಕ್ಕಿ ಹಾರಾಟ

air show 1
Published on

ಬೀದರ್: ಭಾರತೀಯ ವಾಯುಪಡೆ ಹಾಗೂ ಜಿಲ್ಲಾಡಳಿತ ಸಹಯೋಗದಡಿ ವಾಯುಪಡೆ ತರಬೇತಿ ಕೇಂದ್ರದ ವಿಮಾನಗಳು ಆಗಸದಲ್ಲಿ ಮೈನವಿರೇಳಿಸುವಂಥ ಪ್ರದರ್ಶನ ನೀಡಿದವು.
ಇಲ್ಲಿನ ಕೋಟೆಯಲ್ಲಿ ಗ್ರೂಪ್ ಕ್ಯಾಪ್ಟನ್ ಗುರುಪ್ರೀತ್ಸಿಂಗ್ ದಿಲ್ಲೊನ್ ನೇತೃತ್ವದಲ್ಲಿ ವಾಯುಪಡೆಯ 9 ಸೂರ್ಯಕಿರಣ ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದವು. ಕೋಟೆಯಲ್ಲಿ ಸೇರಿದ ಸಾವಿರಾರು ವಿದ್ಯಾರ್ಥಿಗಳು, ಅಧಿಕಾರಿಗಳು ಆಗಸದತ್ತ ದೃಷ್ಟಿ ನೆಟ್ಟು ಕುಳಿತಿರುವಾಗಲೇ ವಿಮಾನಗಳು ಬಣ್ಣ ಬಣ್ಣದ ಹೊಗೆ ಚೆಲ್ಲುತ್ತ ಮಿಂಚಿನಂತೆ ಬಂದವು. ಕೆಂಪು, ನೀಲಿ, ಬಿಳಿ, ಹಸಿರು ಬಣ್ಣದ ದಟ್ಟ ಹೊಗೆ ಸೂಸುತ್ತ ಆಗಸದಲ್ಲಿ ರಂಗುರಂಗಿನ ಚಿತ್ತಾರ ಬಿಡಿಸಿದ್ದನ್ನು ಕಂಡು ಪ್ರೇಕ್ಷಕರು ಖುಷಿಯಿಂದ ಕೇಕೆ ಹಾಕಿದರು.
ಸೂರ್ಯಕಿರಣ ವಿಮಾನಗಳು ಆಗಸದಲ್ಲಿ ಮೇಲಿನಿಂದ ಕೆಳಗೆ, ಪರಸ್ಪರ ಒಂದಾನೊಂದು ಎದುರಿಗೆ ಕ್ರಾಸಿಂಗ್, ಬ್ಯಾರಲ್ ರೋಲ್, ರಾಷ್ಟ್ರೀಯ ಧ್ವಜ ಕೇಸರಿ, ಬಿಳಿ, ಹಸಿರು ಬಣ್ಣಗಳು ಹಾಗೂ ಹೃದಯದ ಚಿತ್ರಗಳನ್ನು ಬಿಡಿಸುವ ಮೂಲಕ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿದವು. ಕೆಲವೊಮ್ಮೆ ಒಂಟಿಯಾಗಿ, ಜೋಡಿ ಮತ್ತು ತಂಡವಾಗಿ ಬರುತ್ತಿದ್ದ ವಿಮಾನಗಳನ್ನು ಕುತೂಹಲದಿಂದ ಜನ ವೀಕ್ಷಿಸಿದರು.
ನಗರಸಭೆ ಅಧ್ಯಕ್ಷ ಮೊಹ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಏರ್ಫೋಸ್೯ ಸ್ಟೇಷನ್‌ನ ಪರಾಗಲಾಲ್, ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಎಸ್ಪಿ ಪ್ರದೀಪ್ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಇತರರಿದ್ದರು.

600ಕ್ಕೂ ಅಧಿಕ ಪ್ರದರ್ಶನ
1996ರಲ್ಲಿ ಆರಂಭವಾದ ಸೂರ್ಯಕಿರಣ ಏರೋಬ್ಯಾಟಿಕ್ ಟೀಮ್ ವಿಮಾನಗಳು ಈವರೆಗೆ ಭಾರತ ಮಾತ್ರವಲ್ಲದೆ ಶ್ರೀಲಂಕಾ, ಸಿಂಗಾಪುರ, ದುದೈ ಇತರ ದೇಶಗಳಲ್ಲಿ 600ಕ್ಕೂ ಹೆಚ್ಚಿನ ಪ್ರದರ್ಶನ ನೀಡಿವೆ. 9 ವಿಮಾನಗಳ ಈ ಏರ್ಕ್ರಾಫ್ಟ್ ಟೀಮ್ ಇಡೀ ಏಷ್ಯಾ ಖಂಡದ ಭಾರತದಲ್ಲಿ ಮಾತ್ರ ಇರುವುದು ವಿಶೇಷ. ಈ ಲೋಹದ ಹಕ್ಕಿಗಳು ಆಕಾಶದಲ್ಲಿ ಆಕರ್ಷಕ ಪ್ರದರ್ಶನ ನೀಡುವ ಮೂಲಕ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net