ನೌಕರರ ಚುನಾವಣೆ ಪಾರದರ್ಶಕ ನಡೆಸಿ

memo
Published on

ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಹಾಗೂ ಜಿಲ್ಲಾ ಶಾಖೆಯ 2024-29ರ ಚುನಾವಣೆ ಪ್ರಕ್ರಿಯೆ ಪಾರದರ್ಶಕ ನಡೆಸಲು ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘ ಆಗ್ರಹಿಸಿವೆ.
ಎರಡು ಸಂಘಗಳ ಪ್ರಮುಖರು ಜಂಟಿಯಾಗಿ ನಗರದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಮನವಿಪತ್ರ ಸಲ್ಲಿಸಿ, ಸರ್ಕಾರಿ ನೌಕರರ ಸಂಘದ ಚುನಾವಣೆ ಘೋಷಣೆಯಾದರೂ ಈವರೆಗೆ ಮತದಾರರ ಪಟ್ಟಿ ಪ್ರಕಟಿಸಿಲ್ಲ. ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಈವರೆಗೆ ಮತದಾರರ ಪಟ್ಟಿ ಪ್ರಕಟಿಸದೆ ಕರ್ತವ್ಯಲೋಪ ಎಸಗಿದ್ದಾರೆ. ಹಲವು ಬಾರಿ ಮನವಿಪತ್ರ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಶುರುವಾಗುವವರೆಗೆ ಮತದಾರರ ಪಟ್ಟಿ ದೊರೆಯದಂತೆ ಮಾಡಿ ಚುನಾವಣೆಗೆ ಸ್ಪರ್ಧಿಸುವ ಪ್ರತಿಸ್ಪರ್ಧೆಗಳನ್ನು ಮತಪಟ್ಟಿಯಿಂದ ತೆಗೆದು ಹಾಕಿ ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ನಡೆದುಕೊಳ್ಳುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ವಿರೋಧಿಗಳು ಇಲ್ಲದಂತೆ ಮಾಡಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಹುನ್ನಾರ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ಸಂಘದ ಬೈಲಾ ಪ್ರಕಾರ ಮತದಾರರ ಕರಡು ಪಟ್ಟಿ ಜುಲೈ 1ರಂದು ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಜು.10ರವರೆಗೆ ಕಾಲಾವಕಾಶ ನೀಡಬೇಕಾಗಿತ್ತು. ಈ ಸಂಬಂಧ ಕೇಂದ್ರ ಸಂಘದಿಂದ ಎಲ್ಲ ಜಿಲ್ಲಾ ಶಾಖೆಗಳಿಗೆ ಸೂಚನೆ ಕೊಟ್ಟರೂ ಈವರೆಗೆ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ಚುನಾವಣಾಧಿಕಾರಿ ಯಾರು ಎಂಬುದು ತಿಳಿಯದಂತೆ ಗೌಪ್ಯವಾಗಿಡಲಾಗಿದೆ ಎಂದು ಆರೋಪಿಸಿದ್ದಾರೆ.
ತಾಲೂಕು ಶಾಖೆ ಚುನಾವಣೆ ಅ.9ರಿಂದ 28 ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ನಿದರ್ೇಶಕರ ಸ್ಥಾನಗಳಿಗೆ ಅ.28ರಿಂದ ನ.16ರೊಳಗೆ ಚುನಾವಣೆ ನಡೆಸುವಂತೆ ನಿದರ್ೇಶನ ನೀಡಲಾಗಿದೆ. ಆದರೆ ಮತದಾರರ ಪಟ್ಟಿ ಪ್ರಕಟಿಸಲು ಗಂದಗೆ ವಿಳಂಬ ಮಾಡುತ್ತಿರುವುದು ಅನುಮಾನ ಮೂಡಿಸುತ್ತಿದೆ ಎಂದು ಗಮನ ಸೆಳೆದಿದ್ದಾರೆ.
ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು, ಅಧಿಕಾರಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಬೇಕು. ಮತದಾನ ಹಕ್ಕಿನಿಂದ ಯಾವೊಬ್ಬ ನೌಕರ ವಂಚಿತರಾಗಬಾರದು. ನೌಕರರ ಹೆಸರು ಮತದಾರ ಪಟ್ಟಿಯಿಂದ ಕೈಬಿಟ್ಟರೆ ಸಹಿಸಲಾಗದು. ಕಂದಾಯ ಅಥವಾ ಸಹಕಾರ ಇಲಾಖೆ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಬೇಕು ಎಂದು ಮನವಿಪತ್ರದಲ್ಲಿ ಆಗ್ರಹಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾಂವೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಮಾಳಗೆ, ಪ್ರಮುಖರಾದ ರಾಜು ಸಾಗರ್, ಸುನೀಲ ಕಸ್ತೂರೆ, ಪಂಡಿತ, ಡೇವಿಡ್, ದತ್ತು ಸ್ವಾಮಿ, ಕಾಶೀನಾಥ, ಅಶೋಕ, ಶಿವಕುಮಾರ ಹೈದರ್ ಅಲಿ, ಸೋಮನಾಥ, ಯುಸೂಫ್, ಪ್ರಕಾಶ ಮಹಿಮಾಕರ್, ಮುಸ್ಸಾರ್ ಅಲಿ, ಅಶ್ರಫ್ ಅಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net