

ಬಸವಕಲ್ಯಾಣ: ಧನ್ನೂರ(ಆರ್) ಗ್ರಾಮಕ್ಕೆ ಮಂಜೂರಾದ ಪ್ರಾಥಮಿಕ ಆರೋಗ್ಯ ವಿಸ್ತೀರ್ಣ ಕೇಂದ್ರ ಈಚೆಗೆ ಕಾರ್ಯಾರಂಭ ಮಾಡಿತು.
ಕೇಂದ್ರ ಉದ್ಘಾಟಿಸಿದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ಹಲವು ವರ್ಷಗಳ ಬೇಡಿಕೆ ಈಡೇರಿದ್ದು ಖುಷಿ ತಂದಿದೆ. ಸದ್ಯ ಗ್ರಾಮ ಪಂಚಾಯಿತಿ ಹಳೆಯ ಕಟ್ಟಡದಲ್ಲಿ ಕೇಂದ್ರ ಆರಂಭಿಸಲಾಗಿದೆ. ಬರುವ ದಿನಗಳಲ್ಲಿ ಸರ್ಕಾರಿ ಜಾಗ ಗುರುತಿಸಿ ಭವ್ಯ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.
ಗ್ರಾಪಂ ಸದಸ್ಯ ರಾಚಣ್ಣ ಸಾಹುಕಾರ್ ಮಾತನಾಡಿ, ಎರಡು ವರ್ಷ ಹಿಂದೆ ಊರಲ್ಲಿ ಆರೋಗ್ಯ ಕೇಂದ್ರ ಉದ್ಘಾಟಿಸಿದ್ದರೂ ಕೆಲ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿತ್ತು. ಶಾಸಕರ ವಿಶೇಷ ಕಾಳಜಿಯಿಂದ ಮತ್ತೆ ಶುರುವಾಗಿದ್ದು ಖುಷಿ ನೀಡಿದೆ ಎಂದರು.
ಖೇಳಗಿ ಶ್ರೀ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಸದಸ್ಯರಾದ ಪದ್ಮಾವತಿ ಸ್ವಾಮಿ, ಸಂಗಮ್ಮ ತಿಪ್ಪಣ್ಣ, ಅನೀತಾ ಶರಣಪ್ಪ, ನೀಲಕಂಠ ಔಂಟಗಿ, ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆ ಸಿಎಂಒ ದೀಪಿಕಾ, ಕಲಖೋರಾ ಪಿಎಚ್ಸಿ ಆರೋಗ್ಯಾಧಿಕಾರಿ ರವಿರಾಜ್, ಪ್ರಮುಖರಾದ ಶಿವಲಿಂಗಯ್ಯ ಸ್ವಾಮಿ, ಶ್ರೀನಾಥ ಪಾಟೀಲ್, ಅಣ್ಣಾರಾವ ಪುರುಷೋತ್ತಮ, ಅರುಣಕುಮಾರ ಬಿರಾದಾರ್, ರಾಜಕುಮಾರ ಬಿರಾದಾರ್ ಇತರರಿದ್ದರು.