

ಬೀದರ್: ಕೇಶವ ಕಾರ್ಯ ಸಂವರ್ಧನ ಸಮಿತಿಯಿಂದ ಹಿಂದು ದೇವಾಲಯಗಳ ಜೀರ್ಣೋದ್ಧಾರ ಮೂಲಕ ಸನಾತನ ಸಂಸ್ಕೃತಿಯನ್ನು ಎತ್ತಿ ಹಿಡಿದ ರಾಜಮಾತಾ ಅಹಲ್ಯಾಬಾಯಿ ಹೋಳ್ಕರ್ ಜನ್ಮ ದಿನಾಚರಣೆ ಸೋಮವಾರ ಸಂಜೆ 6.30ಕ್ಕೆ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಉಪಾಧ್ಯಕ್ಷ ನಾಗೇಶ ಚಿನ್ನಾರಡ್ಡಿ ತಿಳಿಸಿದರು.
18ನೇ ಶತಮಾನದಲ್ಲಿ ಅದ್ಭುತ ಆಡಳಿತಗಾರ್ತಿ, ಹಿಂದು ಧರ್ಮದ ಪುನರೋದ್ಧಾರಕಿಯಾಗಿ ಪ್ರಜ್ವಲಿಸಿದ್ದು ಅಹಲ್ಯಾಬಾಯಿ. ಅವರ 300ನೇ ಜನ್ಮದಿನವನ್ನು ಅದ್ದೂರಿ, ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಿಲ್ಲಿ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಪ್ರಚಾರ ಪ್ರಮುಖ ಪ್ರದೀಪ್ ಜಿ.ಜೋಶಿ, ಕಲಾವಿದೆ ರೇಖಾ ಸೌದಿ ಮಾತನಾಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಅಧ್ಯಾತ್ಮ ಭಾರತ ಕಟ್ಟಬೇಕೆಂಬುದು ಅಹಲ್ಯಾಬಾಯಿ ಸಂದೇಶವಾಗಿತ್ತು. ಮಹಿಳೆ ಅಬಲೆಯಲ್ಲ, ಸಬಲೆ ಎಂಬುದಕ್ಕೆ ಹೋಳ್ಕರ್ ದೊಡ್ಡ ಉದಾಹರಣೆ. ಬಹುದೊಡ್ಡ ಸಾಮ್ರಾಜ್ಯ ಕಟ್ಟಿ ಯುದ್ಧ ಮಾಡಿ ಗೆದ್ದ ಕಡೆ ಮಂದಿರಗಳ ಜೀರ್ಣೋದ್ದಾರ ಮಾಡಿದರು. ದಾಳಿಗೆ ಒಳಗಾಗಿದ್ದ ಸೌರಾಷ್ಟ್ರ ಸೋಮನಾಥ ಸೇರಿ ಜ್ಯೋತಿರ್ಲಿಂಗಗಳ ಮಂದಿರಗಳನ್ನು ಮರು ನಿರ್ಮಾಣ ಮಾಡಿದರು. ಇಲ್ಲಿನ ಮೈಲಾರ ಮಲ್ಲಣ್ಣನ ದೇವಸ್ಥಾನದ ಜೋಡಿ ಕಂಬಗಳನ್ನು ಅಹಲ್ಯಾಬಾಯಿ ನಿರ್ಮಿಸಿದ್ದರು ಎಂದರು.
ಸಮಿತಿ ಜಿಲ್ಲಾಧ್ಯಕ್ಷ ಮಾರುತಿ ಪಂಚಭಾಯಿ ಮಾತನಾಡಿ, ಅಹಲ್ಯಾಬಾಯಿ ಶ್ರೇಷ್ಠ ಆಡಳಿತಗಾರ್ತಿ. ಅವರ ಕುರಿತು ಯುವ ಸಮೂಹಕ್ಕೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಮಿತಿ ಖಜಾಂಚಿ ಹಣಮಂತರಾವ ಪಾಟೀಲ್ ಮಾತನಾಡಿದರು. ಸಮಿತಿ ಸದಸ್ಯ ಪೀರಪ್ಪ ಯರನಳ್ಳಿ, ಶಿವಶರಣಪ್ಪ ಪಾಟೀಲ್ ಇದ್ದರು.