

ಬೀದರ್: ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಅರ್ಪಣೆ ಅಭಿಯಾನ, ಶ್ರಾವಣ ಶಿವದರ್ಶನ ಸಂಚಾರ ಸಮಾರೋಪ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭ ಸೆ.22ರಂದು ಪ್ರತಾಪನಗರದ ಬೆಲ್ದಾಳೆ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಬೇಮಳಖೇಡ ಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಹೇಳಿದರು.
ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಸಾನ್ನಿಧ್ಯದ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕೋರಿದರು.
ಬೆಳಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಪೌರಾಡಳಿತ ಸಚಿವ ರಹೀಮ್ ಖಾನ್ ಪಂಚಾಚಾರ್ಯ ಧ್ವಜಾರೋಹಣ ಮಾಡುವರು. ಸಂಸದ ಸಾಗರ್ ಖಂಡ್ರೆ, ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಇತರರು ಪಾಲ್ಗೊಳ್ಳುವರು ಎಂದರು.
ಶ್ರೀ ಸಿದ್ಧಾಂತ ಶಿಖಾಮಣಿ ಅಭಿಯಾನ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ, 22ರಂದು ಬೆಳಗ್ಗೆ 8.30ಕ್ಕೆ ಶ್ರೀ ಪಾಪನಾಶ ಮಂದಿರದಿಂದ ಬೆಲ್ದಾಳೆ ಕಲ್ಯಾಣ ಮಂಟಪವರೆಗೆ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥಗಳೊಂದಿಗೆ ಶ್ರೀಶೈಲ ಜಗದ್ಗುರುಗಳ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಸಮಿತಿ ಕಾರ್ಯಾಧ್ಯಕ್ಷ ಶಿವಯ್ಯ ಸ್ವಾಮಿ ಮಾತನಾಡಿ, ಸಿದ್ಧಾಂತ ಶಿಖಾಮಣಿ ಅಭಿಯಾನದಡಿ 46 ಕಡೆ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ವಿದೇಶಿ ರಾಯಭಾರಿಗಳು, ಸಚಿವರು, ಅಧಿಕಾರಿಗಳು ಸೇರಿ ದೇಶಾದ್ಯಂತ 1008 ಗ್ರಂಥಗಳನ್ನು ಸಮರ್ಪಣೆ ಮಾಡಲಾಗಿದೆ ಎಂದು ಹೇಳಿದರು.
ಸಮಿತಿ ಗೌರವಾಧ್ಯಕ್ಷ ಶಿವಶರಣಪ್ಪ ವಾಲಿ, ಉಪಾಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ್, ಖಜಾಂಚಿ ಕಂಟೆಪ್ಪ ಭಂಗೂರೆ, ಸದಸ್ಯರಾದ ಶಿವಕುಮಾರ ಪಾಟೀಲ್ ತೇಗಂಪುರ, ಮಹಾಂತೇಶ ಬಿರಾದಾರ್, ಮಹೇಶ ಪಾಟೀಲ್, ಮಹಾಲಿಂಗ ಸ್ವಾಮಿ ಚಟ್ನಳ್ಳಿ, ಶಿವಕುಮಾರ ಸ್ವಾಮಿ ಇತರರಿದ್ದರು.
ಐವರು ಮಹನೀಯರಿಗೆ ಪುರಸ್ಕಾರ
ಅಖಿಲ ಭಾರತ ವೀರಶೈವ ಮಹಾಸಭೆ ಮಾಜಿ ಅಧ್ಯಕ್ಷರಾದ ಶತಾಯುಷಿ ಡಾ.ಭೀಮಣ್ಣ ಖಂಡ್ರೆ, ಮಾಜಿ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್, ನಟ, ನಿರ್ದೇಶಕ ಎಸ್.ನಾರಾಯಣ, ರಾಜೇಶ್ವರ ನಿಟ್ಟೂರೆ ಉದಗೀರ, ಉದ್ಯಮಿ ಜಿ.ಟಿ. ಸುರೇಶಕುಮಾರ ಅವರಿಗೆ ಶ್ರೀ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಶ್ರೀ ರಾಜಶೇಖರ ಶಿವಾಚಾರ್ಯರು ತಿಳಿಸಿದರು.