ಖರ್ಗೆ ಮೆಚ್ಚಿಸಲು ಸಂಪುಟ ಸಭೆ

Bhagavant Khuba
Published on

ಬೀದರ್: ಕಲಬುರಗಿ ಸಚಿವ ಸಂಪುಟ ಸಭೆ ತೋರಿಕೆಗೆ ಸೀಮಿತವಾಗಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೆಚ್ಚಿಸುವ ಸಭೆ ಇದಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ.
ಸಭೆಯಲ್ಲಿ ಹೇಳಿಕೊಳ್ಳುವ ನಿರ್ಣಯಗಳು ತೆಗೆದುಕೊಂಡಿಲ್ಲ. ಬೀದರ್ ಲೋಕಸಭೆ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕಲ್ಯಾಣ ಕರ್ನಾಟಕದ ಜನರಿಗೆ ದಿಶಾಬೂಲ್ ಮಾಡುವ ಇಂಥ ಸಚಿವ ಸಂಪುಟ ಸಭೆ ಅಗತ್ಯವಿರಲಿಲ್ಲ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬೀದರ್ ಲೋಕಸಭೆ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕಳೆದ 16 ತಿಂಗಳಲ್ಲಿ ಎರಡ್ಮೂರು ಬಾರಿ ಸಿಎಂ ಅವರನ್ನು ಭೇಟಿ ಮಾಡಿ ಗಮನಕ್ಕೆ ತಂದಿರುವೆ. ಆದರೆ ಒಂದೇ ಒಂದು ಕಾಮಗಾರಿಗೆ ಅನುದಾನ ನೀಡಿಲ್ಲ ಎಂದು ದೂರಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಆರು ವರ್ಷ ಹಿಂದೆ ಸಿಎಂ ಆಗಿದ್ದಾಗ ಶಂಕುಸ್ಥಾಪನೆ ಮಾಡಿದ್ದರು. ಕಾಮಗಾರಿ ಪ್ರಾರಂಭವೇ ಆಗಿಲ್ಲ ಎಂದಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಮಂಜೂರಾಗಿ ಟೆಂಡರ್ ಪ್ರಕ್ರಿಯೆಗೆ ಆಡಳಿತಾತ್ಮಕ ಅನುಮೋದನೆಗೊಂಡಿದ್ದ 1500 ಕೋಟಿ ರೂ. ನೀರಾವರಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಒಂದು ರೂ. ಮೀಸಲಿಟ್ಟಿಲ್ಲ. ಬೃಹತ್ ಯೋಜನೆ ಕೈಬಿಟ್ಟು ಕೇವಲ 100 ಕೋಟಿ ರೂ. ಕೃಷಿಗೆ ಮೀಸಲಿಟ್ಟು ರೈತರಿಗೆ ಅವಮಾನ ಮಾಡಲಾಗಿದೆ ಎಂದು ದೂರಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ ಎಂದು ಸಿಎಂ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಬೀದರ್ ಜಿಲ್ಲೆಗೆ ಸೋಲಾರ್ ಯೋಜನೆ, ಸಿಪೆಟ್ ಕಾಲೇಜು, ಬೀದರ್-ನಾಂದೇಡ್ ಹೊಸ ರೈಲ್ವೆ ಲೈನ್ ಮುಂತಾದ ಯೋಜನೆಗಳಿಗೆ ಮಂಜೂರಾತಿ ನೀಡಿದೆ. ಆದರೆ ಈ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net