

ಔರಾದ್: ಬಿಜೆಪಿಯಿಂದ ದೇಶಾದ್ಯಂತ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಔರಾದ್ ವಿಧಾನಸಭೆ ಕ್ಷೇತ್ರದಲ್ಲಿ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಪಟ್ಟಣ, ಚಿಂತಾಕಿ, ವಡಗಾಂವ ಹಾಗೂ ಸಂತಪುರಗಳಲ್ಲಿ ಗುರುವಾರ ಪ್ರವಾಸ ಕೈಗೊಂಡು ಮಹಾಶಕ್ತಿ ಕೇಂದ್ರ ಪ್ರಮುಖರು, ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಅವರು, ದೇಶದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸಬೇಕು. ದೇಶದ ಹಿತದೃಷ್ಟಿಯಿಂದ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಮನೆ-ಮನೆಗೆ ಭೇಟಿ ನೀಡಿ ಸದಸ್ಯತ್ವ ಮಾಡಿಸಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ಕಾರ್ಯಕರ್ತ ಗುರಿ ನಿಗದಿಪಡಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು. ಕಾರ್ಯಕರ್ತರ ಪಕ್ಷವಾಗಿರುವ ಬಿಜೆಪಿಯನ್ನು ಇನ್ನಷ್ಟು ಬಲಪಡಿಸಬೇಕೆಂಬ ಸಂಕಲ್ಪದೊಂದಿಗೆ ಔರಾದ್ ಕ್ಷೇತ್ರದಿಂದ 1.20 ಲಕ್ಷ ಸದಸ್ಯರನ್ನಾಗಿಸುವ ಗುರಿ ಇಟ್ಟುಕೊಂಡಿದ್ದೇವೆ. ಅತಿ ಹೆಚ್ಚು ಸದಸ್ಯರನ್ನಾಗಿ ಮಾಡುವವರಿಗೆ ವೈಯಕ್ತಿಕ ನೆರವು ನೀಡಿ ಸನ್ಮಾನ ಮಾಡುವೆ. ಹೀಗಾಗಿ ಕಾರ್ಯಕರ್ತರು ಹುರುಪು ಮತ್ತು ಆಸಕ್ತಿಯಿಂದ ಕೆಲಸ ಮಾಡಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಪ್ರಧಾನ ಕಾರ್ಯದರ್ಶಿ ಖಂಡೋಬಾ ಕಂಗಟೆ, ಮುಖಂಡರಾದ ವಸಂತ ಬಿರಾದಾರ್, ಶಿವಾಜಿರಾವ ಪಾಟೀಲ್ ಮುಂಗನಾಳ ಇತರರಿದ್ದರು.