ಯತ್ನಾಳ್ ಒತ್ತಡ ತಂತ್ರ ಸರಿಯಲ್ಲ

Ishwar Khandre
Published on

ಬೀದರ್: ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಶಾಸಕ ಬಸನಗೌಡ ಯತ್ನಾಳ್ ಅವರ ಸಿದ್ಧಸಿರಿ ಸಕ್ಕರೆ ಮತ್ತು ಡಿಸ್ಟಿಲರಿ ಕಾರ್ಖಾನೆ ಪ್ರಕರಣ ಪ್ರಸ್ತುತ ಸುಪ್ರೀಂಕೋಟ್೯ ನಲ್ಲಿದೆ. ಈ ಹಂತದಲ್ಲಿ ರೈತರಿಂದ ಪ್ರತಿಭಟನೆ ಮಾಡಿಸಿ ಒತ್ತಡ ಹೇರುವುದು ಸರಿಯಾದ ಕ್ರಮವಲ್ಲ ಎಂದು ಪರಿಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬಿಜೆಪಿ ಶಾಸಕರಿಗೆ ನ್ಯಾಯಾಲಯದ ಮೇಲೆ ಗೌರವವಿದ್ದರೆ ತೀರ್ಪು ಬರುವವರೆಗೆ ಕಾಯಬೇಕು, ಸುಪ್ರೀಂಕೋರ್ಟ್ ಕಾರ್ಖಾನೆಗೆ ಅನುಮತಿ ನೀಡುವಂತೆ ಸೂಚಿಸಿದರೆ ಸರ್ಕಾರ ನೀಡಲಿದೆ. ಇದರಲ್ಲಿ ರಾಜಕೀಯ ದ್ವೇಷದ ಪ್ರಶ್ನೆಯೇ ಉದ್ಭವಿಸದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋಟ್೯ ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಯತ್ನಾಳ್ ಅವರಿಗೆ ಸೇರಿದ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಗಮ ಕಾನೂನು, ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ಮಾಡಿರುವುದನ್ನು ಗಮನಕ್ಕೆ ತಂದಿದೆ. ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಬಿಜೆಪಿ ಶಾಸಕರಿಗೆ ಪ್ರತ್ಯೇಕ ಕಾನೂನು ಇರುವುದಿಲ್ಲ ಎಂದು ಗುಡುಗಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಯಾಚರಣೆ ಸಮ್ಮತಿ ಪತ್ರ (ಸಿಎಫ್ಒ) ಪಡೆಯದೆ ಕೈಗಾರಿಕೆ ನಡೆಸಿರುವುದು ಕಾನೂನು ಬದ್ಧವೇ ಎಂದು ಪ್ರಶ್ನಿಸಿದ ಖಂಡ್ರೆ, ಕಾರ್ಖಾನೆ ಪೂರ್ವಾನುಮತಿ ಇಲ್ಲದೆ ತನ್ನ ಸಾಮಥ್ರ್ಯ ವಿಸ್ತರಣೆ ಮಾಡಿ ಕಾನೂನುಬಾಹಿರವಾಗಿ ಕಾರ್ಯಾಚರಣೆ ನಡೆಸಿದ್ದರಿಂದ ಕೇಂದ್ರ ಪರಿಸರ ಇಲಾಖೆಯೇ 1.58 ಕೋಟಿ ರೂ. ದಂಡ ವಿಸಿದೆ ಎಂದು ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಾಲಯ ಮೊರೆ ಹೋಗುವುದರಲ್ಲಿ ತಪ್ಪೇನು? ಜತೆಗೆ ನದಿಗೆ ಕೈಗಾರಿಕಾ ತ್ಯಾಜ್ಯ ಹರಿಸಿರುವ ಆರೋಪವೂ ಈ ಕೈಗಾರಿಕೆ ಮೇಲಿದ್ದು, ರೈತರೇ ಈ ಬಗ್ಗೆ ಪ್ರತಿಭಟನೆ ಮಾಡಿದ್ದಾರೆ. ಇದು ಜಲ ಮತ್ತು ಪರಿಸರ ಸಂರಕ್ಷಣಾ ಕಾಯ್ದೆ ಉಲ್ಲಂಘನೆ. ಪರಿಸರ ಸಚಿವನಾಗಿ ಪ್ರಕೃತಿ, ಪರಿಸರ ಉಳಿಸುವ ಜವಾಬ್ದಾರಿ ನಿರ್ವಹಿಸಲೇಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಿಯಮ ಉಲ್ಲಂಘಿಸುವ ಒಬ್ಬರಿಗೆ ಪೂರ್ವಾನ್ವಯವಾಗಿ ಸಿಎಫ್ಒ ಪಡೆಯಲು ಅನುಮತಿಸಿದರೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ. ಹೀಗಾಗಿ ಕೆಎಸ್ಪಿಸಿಬಿ ಕಾನೂನು ರೀತಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯ ದ್ವೇಷದ ಪ್ರಶ್ನೆಯೇ ಇಲ್ಲ. ಇದೆಲ್ಲವೂ ಕಪೋಲಕಲ್ಪಿತ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಕಾಯಬೇಕು. ಹೀಗೆ ರೈತರಿಂದ ಪ್ರತಿಭಟನೆ ಮಾಡಿಸಿ ಒತ್ತಡ ಹೇರುವುದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net