ಡಿಜೆ ಬಂದ್ ತನಿಖೆ ನಡೆಯಲಿ

pressmeet
Published on

ಬೀದರ್: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಬಂದ್ ಮಾಡಿದ ಪೊಲೀಸ್ ಕ್ರಮಕ್ಕೆ ಖಂಡಿಸಲಾಗುವುದು. ಈ ಕುರಿತು ತನಿಖೆ ಮಾಡಬೇಕು ಎಂದು ಗಣೇಶ ಮಹಾಮಂಡಳ ಪ್ರಧಾನ ಕಾರ್ಯದಶರ್ಿ ಬಾಬು ವಾಲಿ ಆಗ್ರಹಿಸಿದರು.
ಪ್ರತಿ ವರ್ಷದಂತೆ ಬುಧವಾರ ರಾತ್ರಿ ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಶಾಂತಿಯುತವಾಗಿ ನಡೆಯುತ್ತಿತ್ತು. ಆದರೆ ಮಧ್ಯರಾತ್ರಿ ದಿಢೀರ್ ಡಿಜೆ ಬಂದ್ ಮಾಡಿ ಗೊಂದಲ ಸೃಷ್ಟಿಸಿದ್ದರು. ಇದರಿಂದ ಸಾಕಷ್ಟು ಗದ್ದಲ ನಡೆಯಿತು. ಈ ಬಗ್ಗೆ ತನಿಖೆ ನಡೆಸುವುದು ಅಗತ್ಯವಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗಣೇಶ ಉತ್ಸವ ಹಿಂದು ಧರ್ಮದ ದೊಡ್ಡ ಹಬ್ಬ. 1980ರಿಂದ ನಗರದಲ್ಲಿ ನಡೆದುಕೊಂಡು ಬಂದ ಪರಂಪರೆಯಂತೆ ಮೆರವಣಿಗೆ ನಡೆಯುತ್ತಿತ್ತು. ಹೀಗಿರುವಾಗ ಯಾವುದೇ ಸೂಚನೆ ಇಲ್ಲದೆ ಡಿಜಿ ಸೌಂಡ್ ಬಂದ್ ಮಾಡಿಸಿ ಲಕ್ಷಾಂತರ ಭಕ್ತರಿಗೆ ನೋವುಂಟು ಮಾಡಲಾಯಿತು ಎಂದರು.
ಪ್ರತಿ ವರ್ಷ ತಡರಾತ್ರಿವರೆಗೆ ಮೆರವಣಿಗೆ ಮಾಡಲಾಗುತ್ತಿದೆ. ಆದರೆ ಈ ಬಾರಿ ಯಾರಿಗೆ ಖುಷಿ ಪಡಿಸಲು ಪೊಲೀಸರು ಈ ರೀತಿ ಮಾಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಬೇರೆ ಧರ್ಮದ ಕಾರ್ಯಕ್ರಮಗಳಿಗೆ ಒಂದು ರೀತಿ, ಗಣೇಶ ವಿಸರ್ಜನೆಗೆ ಒಂದು ರೀತಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಡಿಜೆ ಬಂದ್ ನಂತರ ನಗರದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಹಾಮಂಡಳದ ಪದಾಧಿಕಾರಿಗಳು ಸ್ಥಳೀಯ ಗಣೇಶ ಸಮಿತಿಗಳ ಪ್ರಮುಖರು, ಕಾರ್ಯಕರ್ತರನ್ನು ಶಾಂತಗೊಳಿಸಿ ಸಹಕರಿಸಲು ಕೋರಲಾಗಿತ್ತು. ದೇವರ ದಯದಿಂದ ಯಾವುದೇ ಅನಾಹುತವಾಗಿಲ್ಲ ಎಂದರು.
ನಗರದಲ್ಲಿ ನಡೆದಂತೆ ಜಿಲ್ಲೆಯ ಯಾವ ಭಾಗದಲ್ಲಿ ಈ ರೀತಿ ಮರುಕಳಿಸಬಾರದು. ವಿವಿಧೆಡೆ 7, 9, 11ನೇ ದಿನಕ್ಕೆ ವಿಸರ್ಜನೆ ಮಾಡುತ್ತಾರೆ. ಶಾಂತಿಯುತವಾಗಿ ಮೆರವಣಿಗೆ ಮಾಡಲು ಖಾಕಿ ಪಡೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗಣೇಶ ಉತ್ಸವ ಜಾತಿ, ಧರ್ಮ, ರಾಜಕೀಯ ರಹಿತವಾಗಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತದೆ. ಎಲ್ಲ ಸಮುದಾಯದವರು ಸೇರಿಕೊಂಡು ಭವ್ಯವಾಗಿ ಮೆರವಣಿಗೆ ಮಾಡುತ್ತವೆ. ಕಳೆದ ನಾಲ್ಕೂವರೆ ದಶಕದಿಂದ ಯಾವುದೇ ಅನಾಹುತವಾಗಿಲ್ಲ. ಆದರೆ ಪ್ರಸ್ತುತ ಮೆರವಣಿಗೆಯಲ್ಲಿ ಡಿಜೆ ಬಂದ್ ಮಾಡಿದ್ದ ಪೊಲೀಸ್ ಕ್ರಮ ಸರಿಯಲ್ಲ. ಈ ಬಗ್ಗೆ ತನಿಖೆ ನಡೆಯಬೇಕು ಎಂದರು.
ಮಹಾಮಂಡಳ ಉಪಾಧ್ಯಕ್ಷ ಈಶ್ವರಸಿಂಗ್ ಠಾಕೂರ್ ಮಾತನಾಡಿ, ನಾವು ಭಾರತೀಯರು, ಹಿಂದುಗಳು. ನಮ್ಮ ಹಬ್ಬ ಆಚರಿಸುವುದು ನಮ್ಮ ನೆಲದಲ್ಲಿ ಹೊರತು ಬಾಂಗ್ಲಾದಲ್ಲಿ ಅಲ್ಲ. ಹಲವು ವರ್ಷಗಳ ಮೆರವಣಿಗೆ ಸಂಪ್ರದಾಯ ಗೊತ್ತಿದ್ದರೂ ಪೊಲೀಸರು ದಿಢೀರ್ ಡಿಜೆ ಬಂದ್ ಮಾಡಿದ್ದು ಸರಿಯಲ್ಲ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದರು.
ಮೆರವಣಿಗೆ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಸೂರ್ಯಕಾಂತ ಶೆಟಕಾರ, ಚಂದ್ರಶೇಖರ ಗಾದಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net