ಸಾಧನೆಗೆ ಬೇಕು ಆತ್ಮಬಲ ಅಸ್ತ್ರ

Oplus_131072
Oplus_131072
Published on

ಬಸವಕಲ್ಯಾಣ: ಯಾವ ಕಾರ್ಯಗಳ ಸಾಧನೆಗೆ ಮನೋಬಲ, ಆತ್ಮಬಲ ಅಸ್ತ್ರ ಬೇಕು ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಏಕಲೂರವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಹನುಮಾನ ಮಂದಿರ ಕಳಸಾರೋಹಣ, ಶ್ರಾವಣ ಮಾಸದ ಸಮಾಪ್ತಿ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿ, ಮನೋಶಕ್ತಿ ಅದ್ಭುತವಾದ ಸಾಧನೆಗಳಿಗೆ ಪೂರಕ ಇಂಧನ ಒದಗಿಸುತ್ತದೆ. ಮನಸ್ಸನ್ನು ಗೆದ್ದವನೇ ಮಹೇಶ್ವರ ಎಂದರು.
ಚಂಚಲತೆ ಹಾಗೂ ಆತ್ಮಸ್ಥೈರ್ಯವಿಲ್ಲದ ಮನಸ್ಸು ಏನನ್ನು ಸಾಸಲಾಗದು, ಮನಸ್ಸು ಬುದ್ಧಿಯ ನಿಯಂತ್ರಣದಲ್ಲಿಡುವುದೂ ಒಂದು ಸಾಧನೆ. ತನ್ನ ಶಕ್ತಿ, ಸಾಮಥ್ರ್ಯದ ಅರಿವು ಗೊತ್ತಾದಾಗಲೆ ಮನುಷ್ಯ ಅತ್ಯುನ್ನತ ಸಾಧನಾ ಶಿಖರ ತಲುಪಲು ಸಾಧ್ಯವಾಗುತ್ತದೆ. ಜಾಂಬವಂಥ ಆಂಜನೇಯನಿಗೆ ಅವನಲ್ಲಿರುವ ಅಗಾಧ ಶಕ್ತಿಯ ಅರಿವು ಮೂಡಿಸಿದಾಗ ಸಾಗರೋಲ್ಲಂಘನ ಮಾಡಿ ಲಂಕೆಯ ಅಶೋಕ ವನದಲ್ಲಿರುವ ಸೀತಾಮಾತೆಯನ್ನು ಕಾಣುವಂತಾಯಿತು. ಹೀಗಾಗಿ ದೃಢಸಂಕಲ್ಪ, ನಿರಂತರ ಪ್ರಯತ್ನ ಇದ್ದರೆ ಸಾಧನೆ ಮಾಡಬಹುದು ಎಂದರು.
ಹನುಮನ ಎದೆಯಲ್ಲಿ ಸೀತಾರಾಮ ಇರುವಂತೆ ಏಕಲೂರ ವಾಡಿ ಜನರ ಹೃದಯದಲ್ಲಿ ಶ್ರೀ ಚನ್ನಬಸವ ಶಿವಯೋಗಿಗಳು ಸದಾ ಇರುತ್ತಾರೆ ಎನ್ನುವುದಕ್ಕೆ ಸಮಾರಂಭವೇ ನಿದರ್ಶನ ಎಂದು ಹೇಳಿದರು.
ಶ್ರೀ ಗುರುಪಾದಲಿಂಗ ಸ್ವಾಮೀಜಿ ಬಬಲಾದ ನೇತೃತ್ವ ವಹಿಸಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ಅಣ್ಣಾರಾಯ ಜಮಾದಾರ, ಕಾರ್ಯದರ್ಶಿ ಸುನೀಲಕುಮಾರ, ಲೋಹಿತಕುಮಾರ, ಅಂಬಾರಾಯ ಚಿಂತಲೆ, ವಿಠ್ಠಲ ಸಿದ್ದಪ್ಪ, ನಾಮದೇವ ಚಿಂತಲೆ, ಕಾರ್ತಿಕ ಸ್ವಾಮಿ ಯಲಗುಂಡಿ, ದಿಲೀಪ ದೇಸಾಯಿ ಇತರರಿದ್ದರು. ಲಿಂಗರಾಜ ಜಮಾದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಹಿತ್ ಜಮಾದಾರ ನಿರೂಪಣೆ ಮಾಡಿದರು. ಶಿವಶರಣಪ್ಪ ಚಿಂತಲೆ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಅಲಂಕೃತ ಸಾರೋಟಿನಲ್ಲಿ ಪೂಜ್ಯರ ಅದ್ದೂರಿ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net