

ಔರಾದ್: ತಾಲೂಕಿನ ಹೆಡಗಾಪುರನಲ್ಲಿ ಜಾನುವಾರು ತಳಿ ಸಂವರ್ಧನಾ ಕೇಂದ್ರ ಮತ್ತು ತರಬೇತಿ ಕೇಂದ್ರದ ಕಾಮಗಾರಿ ಆರಂಭಿಸಬೇಕೆಂಬ ಮನವಿಗೆ ಪಶು ಸಂಗೋಪನೆ ಸಚಿವರು ಸ್ಪಂದಿಸಿದ್ದು, ಸೆ.18ರಂದು ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಶಾಸಕ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಜಾನುವಾರು ತಳಿ ಸಂವರ್ಧನಾ ಕೇಂದ್ರ ನಿರ್ಮಿಸಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಬೇಕೆಂಬುದು ಬಹಳಷ್ಟು ದಿನಗಳ ಬಯಕೆಯಾಗಿತ್ತು. ಹಿಂದೆ ನಾನು ಪಶು ಸಂಗೋಪನೆ ಸಚಿವನಾಗಿದ್ದಾಗ ಕೇಂದ್ರ ಸ್ಥಾಪಿಸಲು ಸಾಕಷ್ಟು ಪ್ರಯತ್ನ ವಹಿಸಿದ್ದೆ. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ತಂದು 34.49 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ ಸಚಿವ ಸಂಪುಟದಿಂದಲೂ ಅನುಮೋದನೆ ಕೊಡಿಸಿದ್ದೆ. ನಂತರ ಹೆಡಗಾಪುರ ಗ್ರಾಮದಲ್ಲಿ ಜಿಲ್ಲಾಡಳಿತದ ಮೂಲಕ 33 ಎಕರೆ ನಿವೇಶನ ಒದಗಿಸಿದ್ದೆ. ಬಳಿಕ ಅಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಪಶು ಸಂಗೋಪನೆ ಇಲಾಖೆಯನ್ನು ಸಂಪೂರ್ಣ ಕಡೆಗಣಿಸುತ್ತಾ ಬಂದಿತ್ತು. ಹೀಗಾಗಿ ವಿಳಂಬವಾಗಿದೆ ಎಂದಿದ್ದಾರೆ.
ಜಾನುವಾರು ತಳಿ ಸಂವರ್ಧನಾ ಕೇಂದ್ರದ ಕೆಲಸ ಆರಂಬಿಸುವಂತೆ ರಾಜ್ಯ ಸರ್ಕಾರಕ್ಕೆ ಅನೇಕ ಸಲ ಪತ್ರ ಬರೆದು ಗಮನಕ್ಕೆ ತಂದಿರುವೆ. ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಅವರನ್ನು ಅನೇಕ ಬಾರಿ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದೇನೆ. ಮನವಿಗೆ ಸ್ಪಂದಿಸಿದ್ದು, ಸೆ.18ರಂದು ಕೇಂದ್ರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಭೂಮಿ ಪೂಜೆ ನೆರವೇರಿಸುವುದಾಗಿ ತಿಳಿಸಿದ್ದಾರೆ ಎಂದರು.
ಜಿಲ್ಲೆಯ ಹವಮಾನ ಕೃಷಿಯೊಂದಿಗೆ ಹೈನೋದ್ಯಮ, ಜಾನುವಾರು ಪಾಲನೆ, ಕುರಿ-ಮೇಕೆ ಸಾಕಾಣಿ ಮಾಡಲು ಯೋಗ್ಯವಾಗಿದೆ. ಈ ಭಾಗದ ದೇಸಿ ಜಾನುವಾರು ತಳಿಗಳನ್ನು ಉಳಿಸಿ ಬೆಳೆಸಬೇಕೆಂಬ ಸದಾಶಯದೊಂದಿಗೆ ಜಾನುವಾರು ತಳಿ ಸಂವರ್ಧನಾ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹೊಸದಾಗಿ ನಿರ್ಮಾಣಗೊಳ್ಳಲಿರುವ ಜಾನುವಾರು ತಳಿ ಸಂವರ್ಧನಾ ಕೇಂದ್ರದಲ್ಲಿ ದೇಸಿ ಜಾನುವಾರು, ಹಸು, ಎಮ್ಮೆ, ಕುರಿ, ಹಂದಿ, ಮೇಕೆ, ಕೋಳಿ ಸಾಕಾಣಿಕೆ ಘಟಕಗಳು ಇರಲಿವೆ. ಜತೆಗೆ ವಸತಿಯುತ ರೈತರ ತರಬೇತಿ ಕೇಂದ್ರ ಸಕಲ ಸೌಕರ್ಯಗಳೊಂದಿಗೆ ನಿರ್ಮಾಣವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.