ಕಂದಗೂಳ ಶಾಲೆಗೆ ಡಿಜಿಟಲ್ ಕೋಣೆ ದೇಣಿಗೆ ಕೊಟ್ಟ ಅಧ್ಯಕ್ಷೆ

Kandgul
Published on

ಔರಾದ್: ತಾಲೂಕಿನ ಕಂದಗೂಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಜಿಟಲ್ ವರ್ಗ ಕೋಣೆ ಉದ್ಘಾಟಿಸಲಾಯಿತು. ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನದ (ಐಟಿ) ಕುರಿತು ಬೋಧನೆ ನೀಡಲು ಪೂರಕವಾಗಿ ಡಿಜಿಟಲ್ ವರ್ಗ ಕೋಣೆ ಆರಂಭಿಸಲಾಗಿದೆ.
ಜಂಬಗಿ ಗ್ರಾಪಂ ಅಧ್ಯಕ್ಷೆ ಸುಮನ್ಬಾಯಿ ಬಾಬುರಾವ ಸಾಹುಕಾರ ಅವರು ಈ ಡಿಜಿಟಲ್ ವರ್ಗ ಕೋಣೆ ದಾನಿಗಳಾಗಿದ್ದಾರೆ. ಹಳ್ಳಿ ಮಕ್ಕಳಿಗೂ ಹೈಟೆಕ್ ಶಿಕ್ಷಣ ಸಿಗಬೇಕು, ತಂತ್ರಜ್ಞಾನದ ಬಳಕೆ ಮಾಡಿಕೊಂಡು ಮಕ್ಕಳು ತಮ್ಮ ಮುಂದಿನ ಕಲಿಕೆಗೆ ಪ್ರಾಥಮಿಕ ಹಂತದಲ್ಲೇ ಭದ್ರ ಬುನಾದಿ ಹಾಕಿಕೊಳ್ಳಬೇಕೆಂಬ ಕಾಳಜಿಯಿಂದಾಗಿ ಸುಮನ್ಬಾಯಿ ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಗೆ ಎರಡು ಕಂಪ್ಯೂಟರ್, ಇತರ ವಸ್ತುಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಸುಮನ್ಬಾಯಿ, ಗ್ರಾಮೀಣ ಮಕ್ಕಳಲ್ಲಿ ಅಗಾಧ ಪ್ರತಿಭೆ ಅಡಗಿದೆ. ಮಕ್ಕಳು ಯಾವತ್ತೂ ಕೀಳರಿಮೆ ಹೊಂದಿರಬಾರದು. ನಾವು ಸಹ ಯಾರಿಗೂ ಕಮ್ಮಿ ಇಲ್ಲ ಎಂಬ ಸಕಾರಾತ್ಮಕ ಚಿಂತನೆಯೊಂದಿಗೆ ಮುಂದಡಿ ಇಟ್ಟು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು. ಶಿಕ್ಷಣದ ಮೂಲಕವೇ ಶ್ರೇಷ್ಠ ಸಾಧನೆ ಮಾಡಿ ತೋರಿಸಬೇಕು. ಇಲ್ಲಿನ ಡಿಜಿಟಲ್ ವರ್ಗ ಕೋಣೆಯ ಲಾಭವನ್ನು ಪಡೆಯಬೇಕು ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷೆ ರುಕ್ಮಿಣಿಬಾಯಿ ಪಂಢರಿನಾಥ, ಎಸ್ಡಿಎಂಸಿ ಅಧ್ಯಕ್ಷ ಸಂತೋಷ ಗೋಪಾಲರಾವ ಮಾಲಿಪಾಟೀಲ್, ಮುಖ್ಯಗುರು ಸುರೇಶರಡ್ಡಿ, ಡಯಟ್ ಹಿರಿಯ ಉಪನ್ಯಾಸಕ ಲಕ್ಷ್ಮಣ ತೂರೆ, ಬಿಆರ್.ಪಿ ಸಂತೋಷರಡ್ಡಿ, ಸಂಪನ್ಮೂಲ ವ್ಯಕ್ತಿಗಳಾದ ರವೀಂದ್ರ ಡಿಗ್ಗಿ, ಅಶೋಕ ಪಾಟೀಲ್, ರಾಜಪ್ಪ ಖಡಕೆ, ಶಿಕ್ಷಕರಾದ ರವಿ, ಸುಪ್ರಿಯಾ, ಸುನೀತಾ, ಭೀಮಾಶಂಕರ, ದತ್ತಾತ್ರಿ, ಕೌಶಲ್ಯಬಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net