

ಬೀದರ್: ಪದವಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಗರದಲ್ಲಿ ಪ್ರತಿಭಟನೆ ನಡೆಸಿತು.
ಡಾ.ಅಂಬೇಡ್ಕರ್ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಪರಿಷತ್ ಪ್ರಮುಖರು, ಅಂಕಪಟ್ಟಿ ನೀಡದೆ ಗುಲ್ಬರ್ಗ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಜತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗಸ್ಟ್ ಮೊದಲ ವಾರದಲ್ಲೇ ಪದವಿ ಪರೀಕ್ಷೆ ಫಲಿತಾಂಶ ಘೋಷಿಸಲಾಗಿದೆ. ಆದರೆ ಈವರೆಗೆ ವಿದ್ಯಾರ್ಥಿಗಳ ಕೈಗೆ ಅಂಕಪಟ್ಟಿ ಸೇರಿಲ್ಲ. ಯಾವ ವಿಷಯದಲ್ಲಿ ಎಷ್ಟು ಅಂಕ ಗಳಿಸಿದ್ದಾರೆ? ಒಟ್ಟು ಎಷ್ಟು ಅಂಕ ಎಂಬ ಮಾಹಿತಿಯೂ ನೀಡಿಲ್ಲ. ಆನ್ ಲೈನ್ ಹಾಗೂ ಆಫ್ ಲೈನ್ ಎರಡರಲ್ಲೂ ಫಲಿತಾಂಶ ತಿಳಿಯುತ್ತಿಲ್ಲ. ಈ ಬಗ್ಗೆ ವಿವಿ ಅಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎಂದು ದೂರಿರು.
ಪದವಿ 6ನೇ ಸೆಮಿಸ್ಟರ್ ಪರೀಕ್ಷೆ ಬರೆದವರು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬೇಕು. ಆದರೆ ಅಂಕಪಟ್ಟಿ ಇಲ್ಲದೆ ಪ್ರವೇಶ ಪಡೆಯಲಾಗುತ್ತಿಲ್ಲ. 1, 2, 3, 4 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆ ಬರೆದವರಿಗೂ ಅಂಕಪಟ್ಟಿ ಸಿಕ್ಕಿಲ್ಲ. ಮೂರು ವರ್ಷದ ಪದವಿಯಲ್ಲಿ ಆರು ಸೆಮಿಸ್ಟರ್ಗಳಿದ್ದು, ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಹಿಂದಿನ ಸೆಮಿಸ್ಟರ್ ಗಳ ಅಂಕಪಟ್ಟಿ ಬರದಿದ್ದರೂ ನಂತರದ ಸೆಮಿಸ್ಟರ್ ನಲ್ಲಿ ಮುಂದುವರಿಸಲಾಗುತ್ತಿದೆ. ಆದರೆ 6ನೇ ಸೆಮಿಸ್ಟರ್ ಬರೆದವರು ಪಿಜಿ ಪ್ರವೇಶಕ್ಕೆ ಪರದಾಡುವಂತಾಗಿದೆ ಎಂದು ಕಿಡಿಕಾರಿದರು.
ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತ ಮೂಲಕ ವಿವಿ ಕುಲಪತಿಗೆ ಸಲ್ಲಿಸಲಾಯಿತು.
ಎಬಿವಿಪಿ ತಾಲೂಕು ಸಂಚಾಲಕ ಮಹೇಶ ಕೌರ್, ನಗರ ಕಾರ್ಯದರ್ಶಿ ಆನಂದ ಅಮದಾಬಾದೆ, ಸಹ ಕಾರ್ಯದರ್ಶಿ ಪವನ್, ನಾಗರಾಜ, ಅಭಿಷೇಕ ಶಂಭು, ರಚನಾ, ಮಮತಾ, ಅತೀಶ್ ವರ್ಮಾ, ಚಾಂದ ಪಾಶಾ, ನಾಗೇಶ್, ಪಾಂಡುರಂಗ, ಮಮತಾ ವಸಂತ, ಕಾವೇರಿ, ಪೂಜಾ, ಅಪೂರ್ವ, ಪ್ರಾರ್ಥನಾ, ಸುಕನ್ಯಾ, ಅಂಬಿಕಾ ಇತರರಿದ್ದರು.