ನೇಮಕಾತಿಯಲ್ಲಿ ಭ್ರಷ್ಟಾಚಾರ: ಸಮಿತಿ ದೂರು

Published on

ಬೀದರ್: ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ,. ಶಿವಕುಮಾರ ಶೆಟಕಾರ್ ಸಿಬ್ಬಂದಿ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಆರೋಪಿಸಿದೆ.
ಸಮಿತಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಜೇಸನ್ ಮೋಡಿ ಹಾಗೂ ಕ್ಷೇತ್ರಾಧಿಕಾರಿ ಪ್ರಶಾಂತ ಗುತ್ತೆದಾರ್ ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.
ಬ್ರಿಮ್ಸ್‍ನಲ್ಲಿ ನೇಮಕಾತಿಯಲ್ಲಿ ಅರ್ಹರನ್ನು ನೇಮಕ ಮಾಡಿಕೊಳ್ಳದೆ, ಅಕ್ರಮ ಎಸಗಲಾಗಿದೆ. ಸರ್ಕಾರದ ಹಣ ದುರುಪಯೋಗ ಪಡೆಸಿಕೊಳ್ಳಲಾಗಿದೆ. ನಿಯಮ ಬಾಹೀರವಾಗಿ ಸಿಬ್ಬಂದಿಯ ಹುದ್ದೆ ಹಾಗೂ ಕೆಡರ್ ಬದಲಾವಣೆ ಮಾಡಲಾಗಿದೆ ಎಂದು ಆಪಾದಿಸಿದ್ದಾರೆ.
ತಮ್ಮ ದೂರಿನ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಕುರಿತು ತನಿಖೆಗೆ ಸಮಿತಿ ರಚಿಸಿ, ತನಿಖೆ ಕೈಗೊಂಡು, ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿತ್ತು. ಆದರೆ, ಈವರೆಗೆ ತನಿಖೆಗೆ ಸಮಿತಿಯನ್ನೇ ರಚಿಸಿಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚಿಸಿದರೂ, ತನಿಖೆ ನಡೆಸಿ ವರದಿ ಸಲ್ಲಿಸಿಲ್ಲ ಎಂದು ದೂರಿದ್ದಾರೆ.
ಬ್ರಿಮ್ಸ್ ನಿರ್ದೇಶಕರು ನಡೆಸಿದ ಅವ್ಯವಹಾರದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ಹಾಗೂ ಇತರರಿಗೂ ಅವರು ದೂರಿನ ಪ್ರತಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net