

ಬೀದರ್: ಜಿಲ್ಲೆಯ ಶಿಕ್ಷಣ ಕ್ಷೇತ್ರದ ವಿಕಾಸಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ)ಯಿಂದ 125 ಕೋಟಿ ರೂ. ಮೀಸಲಿಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಕಮಠಾಣ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಮೆಟ್ರಿಕ್ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಶಾಲೆಗಳಿಗೆ ವರ್ಗ, ಅಡುಗೆ ಕೋಣೆ, ಪೀಠೋಪಕರಣ, ಪಾಠೋಪಕರಣ, ಆಟದ ಮೈದಾನ, ಶುದ್ಧ ಕುಡಿಯುವ ನೀರು ಇತ್ಯಾದಿ ಸೌಕರ್ಯಗಳನ್ನು ಈ ಅನುದಾನದಲ್ಲಿ ಒದಗಿಸಲಾಗುವುದು ಎಂದರು.
ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ, ಸಂಪನ್ಮೂಲ ವ್ಯಕ್ತಿಗಳಿಂದ ಆಂಗ್ಲ, ಸಮಾಜ, ವಿಜ್ಞಾನ ಮತ್ತಿತರ ವಿಷಯಗಳ ಮಾರ್ಗದರ್ಶನ ಮಾಡಿಸಬೇಕಿದೆ ಎಂದು ಹೇಳಿದರು.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು, ಪಾಲಕರು ಹಾಗೂ ಸಾರ್ವಜನಿಕರು ಕೈಜೋಡಿಸಬೇಕಿದೆ. ಮಕ್ಕಳಲ್ಲಿ ನೈತಿಕ, ಮಾನವೀಯ ಮೌಲ್ಯಗಳನ್ನು ಬೆಳೆಸಿದ್ದಲ್ಲಿ ಭವಿಷ್ಯದಲ್ಲಿ ಸಮಾಜ ಹಾಗೂ ದೇಶಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗುತ್ತಾರೆ ಎಂದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ವಿದ್ಯಾರ್ಥಿ ನಿಲಯಗಳಿಗೆ ಸುತ್ತುಗೋಡೆ ನಿರ್ಮಿಸಿ ಸಿಸಿಟಿವಿ ಅಳವಡಿಸಬೇಕು. ಶಾಲಾ-ಕಾಲೇಜಿಗೆ ಹೋಗಿ ಬರುವ ಮಕ್ಕಳ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು.
ಡಿಸಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ, ಗ್ರಾಪಂ ಅಧ್ಯಕ್ಷ ರವಿಕುಮಾರ ಎಸ್.ನಡುವಿನದೊಡ್ಡಿ ಇತರರಿದ್ದರು.