

ಬಸವಕಲ್ಯಾಣ: ವೈದ್ಯರ ಮೇಲೆ ದೇಶಾದ್ಯಂತ ಹೆಚ್ಚುತ್ತಿರುವ ಹಲ್ಲೆ ಪ್ರಕರಣಗಳನ್ನು ಗಂಭೀರ ಪರಿಗಣಿಸಿ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ರಕ್ಷಣೆಗೆ ಕಠಿಣ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕಿ, ಸ್ತ್ರೀರೋಗ ತಜ್ಞೆ ಡಾ.ಸುಶೀಲಾ ಹೊಳಕುಂದೆ ಹೇಳಿದರು.
ನಾರಾಯಣಪುರದ ಜವಾಹರ ನವೋದಯ ವಿದ್ಯಾಲಯದಲ್ಲಿ ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘಗಳ ಒಕ್ಕೂಟ ಹಾಗೂ ಸ್ತ್ರೀರೋಗ ತಜ್ಞರ ಸಂಘದಿಂದ ಕೋಲ್ಕತ ಟ್ರೈನಿ ವೈದ್ಯೆ ಅತ್ಯಾಚಾರ-ಕೊಲೆ ಖಂಡಿಸಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯರು ಸೇರಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೆ ಸಂರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿ. ಹೀಗಾಗಿ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಸೆ ವ್ಯಕ್ತಪಡಿಸಿದರು.
ಸಂಘದ ಚೇರ್ಪರ್ಸನ್ ಡಾ.ಶಾಂತಾ ದುರ್ಗೆ ನಿರ್ದೇಶನದಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೋಲ್ಕತ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಕೊಲೆಯಾಗಿ ತಿಂಗಳಾದರೂ ನ್ಯಾಯ ಸಿಕ್ಕಿಲ್ಲ. ಕೂಡಲೇ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಡಾ.ಪ್ರಿಯಂಕಾ ವರವಟ್ಟೆ, ಡಾ.ದೀಪಾ ಹೊಳಕುಂದೆ, ಉಪ ಪ್ರಾಚಾರ್ಯ ಡಾ.ಭಾವನಾ ಋಷಿ ಇತರರಿದ್ದರು.