ಅರ್ಥಪೂರ್ಣ ಪ್ರಜಾಪ್ರಭುತ್ವ ದಿನ ಆಚರಿಸಲು ಸಿದ್ಧತೆ ಕೈಗೊಳ್ಳಿ

10 bk-1
Published on

ಬಸವಕಲ್ಯಾಣ: ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಅತ್ಯಂತ ವ್ಯವಸ್ಥಿತ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚಿಸಿದರು.
ಬಿಕೆಡಿಬಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದಿನಾಚರಣೆ ನಿಮಿತ್ತ ಶರಣರ ಭೂಮಿ ಬಸವಕಲ್ಯಾಣದಿಂದ ಚಾಮರಾಜನಗರ ಜಿಲ್ಲೆವರೆಗೆ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದರು.
15ರಂದು ಬೆಳಗ್ಗೆ 8.30ರಿಂದ 9.30 ರವರೆಗೆ ಇಲ್ಲಿನ ಅನುಭವ ಮಂಟಪದಿಂದ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ (ಕೆ) ವರೆಗೆ ಸುಮಾರು 45 ಕಿ.ಮೀ. ವರೆಗೆ ಮಾನವ ಸರಪಳಿ ನಿರ್ಮಿಸಿ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಒಂದು ಕಿ.ಮೀ.ಗೆ ಅಂದಾಜು 770 ಜನರು ಬೇಕು. ಜಿಲ್ಲೆಯಲ್ಲಿ 45 ಕಿ.ಮೀ. ವರೆಗೂ ಎಲ್ಲರೂ ಮಾನವ ಸರಪಳಿ ನಿರ್ಮಿಸಲು ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಪ್ರತಿ ಮೂರು ಕಿ.ಮೀ.ಗೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 14 ಜನರನ್ನು ನೇಮಿಸಲಾಗುತ್ತಿದೆ. ನೇಮಿಸಿದ ಸ್ಥಳದಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ದಿನಾಚರಣೆಯಲ್ಲಿ ಪ್ರೌಢ ಶಾಲೆ, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮಾನವ ಸರಪಳಿಗೆ ಸಾಥ್ ನೀಡಬೇಕು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿವಿಧೆಡೆಯಿಂದ ಆಗಮಿಸುವ ಜನರಿಗೆ ಬಸ್ ವ್ಯವಸ್ಥೆ ಮಾಡಲಾಗುವುದು. ಪಟ್ಟಿ ನೀಡಿದರೆ ಅವರಿದ್ದ ಸ್ಥಳದಿಂದ ಕರೆತರುವ ವ್ಯವಸ್ಥೆ ಮಾಡಲಾಗುವುದು. ಬೆಳಗ್ಗೆ ಅನುಭವ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಅಲ್ಲಿ ಸಾಂಸ್ಕೃತಿಕ ಸೇರಿ ವಿವಿಧ ಚಟುವಟಿಕೆ ನಡೆಯಲಿವೆ ಎಂದರು.
ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತ ಪ್ರಕಾಶ ಕುದುರಿ, ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡ, ತಹಸೀಲ್ದಾರ್ ರಾದ ಶಾಂತಗೌಡ ಬಿರಾದಾರ್, ಶಿವಾನಂದ ಮೇತ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net