

ಬೀದರ್: ಶರಣರು ಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆ ವಚನ ಸಾಹಿತ್ಯ. ವಚನಗಳು ಜಾತಿ, ಸಮುದಾಯ ಮೀರಿದ್ದಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ ಶ್ರಾವಣ ಮಾಸದ ಬಸವ ದರ್ಶನ ಪ್ರವಚನ ಮಂಗಲೋತ್ಸವದಲ್ಲಿ ಮಾತನಾಡಿ, ಎಲ್ಲರ ಬದುಕಿಗೂ ಉಪಯುಕ್ತ ಆಗಬಲ್ಲ ಸಾಹಿತ್ಯ ವಚನ ಸಂಗ್ರಹ ಎಂದರು.
ಶ್ರಾವಣ ಮಾಸ ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಶ್ರೇಷ್ಠವಾದದ್ದು. ಸತ್ಸಂಗ, ಸದ್ವಿಚಾರ ಆಲಿಸುವುದರಿಂದ ಮನಸ್ಸಿಗೆ ಶಾಂತಿ ಹಾಗೂ ಹೊಸ ಚೈತನ್ಯ ಸಿಗಲಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಸರ್ವಸಮಾನತೆಗಾಗಿ ವೈಚಾರಿಕ ಕ್ರಾಂತಿ ಮಾಡಿದ್ದರು. ಸಮಾಜದಲ್ಲಿನ ಅಂಕು-ಡೊಂಕು, ಜಾತಿ, ಅಸಮಾನತೆ ನಿರ್ಮೂಲನೆಗಾಗಿ ಕಾಯಕ-ದಾಸೋಹ ಸಿದ್ಧಾಂತ ನೀಡಿದ್ದಾರೆ ಎಂದು ಹೇಳಿದರು.
ಶಾಸಕ ಡಾ.ಶೈಲೆಂದ್ರ ಬೆಲ್ದಾಳೆ ಮಾತನಾಡಿ, ಕೋಪ, ಅಹಂಕಾರದಿಂದ ದೂರವಿದ್ದು ಶಾಂತಿಯುತ ಜೀವನ ರೂಪಿಸಿಕೊಳ್ಳಬೇಕು. ಬಸವಣ್ಣನವರ ಕಳಬೇಡ ಕೊಲಬೇಡ ಸೂತ್ರವನ್ನು ಅಳವಡಿಸಿಕೊಂಡಿದ್ದರೆ ಉನ್ನತ ಗುರಿ ಮುಟ್ಟಬಹುದು ಎಂದರು.
ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಕಾಯಕ, ದಾಸೋಹ ಮತ್ತು ಅನುಭಾವ ತತ್ವ ಆತ್ಮಬಲದ ಶಕ್ತಿ ನೀಡುತ್ತವೆ. ಸತ್ಯ, ಶುದ್ಧ ಕಾಯಕ ಮಾಡಿ ದಾಸೋಹಿಗಳಾಗಬೇಕು. ಇಷ್ಟಲಿಂಗ ಶಿವಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವಂತನಾಗಿ ಅಧ್ಯಾತ್ಮ ಶಕ್ತಿಯ ಚೈತನ್ಯ ಬರುತ್ತದೆ ಎಂದು ಹೇಳಿದರು.
ಪ್ರವಚಕಾರ ಶ್ರೀ ಮಹಾಲಿಂಗ ಸ್ವಾಮೀಜಿ ಮಾತನಾಡಿದರು. ಶಾಂತಾ ಖಂಡ್ರೆ ಬಸವ ಪೂಜೆ ನೆರವೇರಿಸಿದರು. ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಉಮಾಕಾಂತ ಮೀಸೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಾಷ್ಟ್ರೀಯ ಬಸವದಳ ಅಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಜಿಪಂ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಜೈರಾಜ ಖಂಡ್ರೆ, ಎಸ್.ಬಿ. ಬಿರಾದಾರ್, ಸುರೇಶಕುಮಾರ ಸ್ವಾಮಿ ಇದ್ದರು.
ವಚನಶ್ರೀ ನೌಬಾದೆ ವಚನ ಗಾಯನ ನಡೆಸಿಕೊಟ್ಟರು. ಮೀನಾಕ್ಷಿ ಪಾಟೀಲ್ ಸ್ವಾಗತಿಸಿದರು. ವಿಜಯಲಕ್ಷ್ಮೀ ಹುಗ್ಗೆಳ್ಳಿ ನಿರೂಪಣೆ ಮಾಡಿದರು. ಲಕ್ಷ್ಮೀ ಬಿರಾದಾರ್ ವಂದಿಸಿದರು. ವಿವಿಧ ಸ್ಪರ್ಧೆ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.