ಗಣೇಶ ಸಾಮೂಹಿಕ ವಿಸರ್ಜನೆ 11ರಂದು

Ganesh Mahamandal
Published on

ಬೀದರ್: ಗಣೇಶಗಳ ಸಾಮೂಹಿಕ ವಿಸರ್ಜನೆ ಸೆ.11ರಂದು ನಗರದಲ್ಲಿ ನಡೆಯಲಿದ್ದು, ಎಲ್ಲ ಮಂಡಳಿಗಳು ಜಿಲ್ಲಾಡಳಿತದ ನಿಯಮ ಪಾಲಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಗಣೇಶ ಮಹಾಮಂಡಳ ಮನವಿ ಮಾಡಿದೆ.
ನಗರದಲ್ಲಿ ಕರೆದಿದ್ದ ಮಹಾಮಂಡಳ ಸಭೆಯಲ್ಲಿ ಶನಿವಾರ ಗಣೇಶ ಪ್ರತಿಷ್ಠಾಪನೆ ಅದ್ದೂರಿಯಾಗಿ ನಡೆದಿದ್ದು, ವಿವಿಧೆಡೆ ಎತ್ತರದ ವಿಘ್ನ ನಿವಾರಕನ ಮೂರ್ತಿಗಳನ್ನು ಕೂಡಿಸಿ ವಿಶೇಷ ಅಲಂಕಾರ ಮಾಡಿದ್ದು, ವಿಸರ್ಜನೆ ದಿನ ಕಡ್ಡಾಯವಾಗಿ ಸಮಯ ಪಾಲನೆ ಮಾಡಬೇಕು ಎಂದು ಮಹಾಮಂಡಳ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಕೋರಿದರು.
11ರಂದು ಸಂಜೆಯೊಳಗೆ ವಿಸರ್ಜನೆ ಮೆರವಣಿಗೆಯಲ್ಲಿ ಎಲ್ಲ ಗಣೇಶಗಳು ಬಸವೇಶ್ವರ ವೃತ್ತದ ನಯಕಮಾನ್ಗೆ ಪ್ರವೇಶಿಸುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ಗಣಪನ ದರ್ಶನ ಪಡೆಯಲು ಅನುವು ಮಾಡಿಕೊಂಡಬೇಕು. ಪೊಲೀಸ್ ಇಲಾಖೆಯಿಂದ ಪರಿಸರಸ್ನೇಹಿ ಗಣೇಶ ಮಂಡಳಿಗೆ ಬಹುಮಾನ ವಿತರಿಸಲಾಗುತ್ತದೆ. ನಾಲ್ಕು ವರ್ಷದಿಂದ ಪಾಂಡುರಂಗ ಮಂಡಳಿ ಬಹುಮಾನ ಪಡೆದಿದೆ ಎಂದು ತಿಳಿಸಿದರು.
ಮಹಾಮಂಡಳ ಉಪಾಧ್ಯಕ್ಷ ಈಶ್ವರಸಿಂಗ್ ಠಾಕೂರ್, ಸ್ವಾಗತ ಸಮಿತಿ ಅಧ್ಯಕ್ಷ ನಂದಕಿಶೋರ ವರ್ಮಾ, ಮೆರವಣಿಗೆ ಸಮಿತಿ ಗೌರವಾಧ್ಯಕ್ಷ ಸೂರ್ಯಕಾಂತ ಶೆಟಕಾರ, ಅಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಪ್ರಮುಖರಾದ ದೀಪಕ ವಾಲಿ, ಡಾ.ರಜನೀಶ್ ವಾಲಿ, ಶಶಿಧರ ಹೊಸಳ್ಳಿ, ಮಹೇಶ ಪಾಲಂ, ಹಣಮಂತ ಬುಳ್ಳಾ, ಚಂದ್ರಶೇಖರ ಗಾದಾ, ದೇವೇಂದ್ರ ಎಮ್ಮೇಕರ್, ಗಣೇಶ ಭೋಸ್ಲೆ, ಚಂದ್ರಶೇಖರ ಗಾದಾ, ಸುನೀಲ ದಳವೆ, ಗೋರಖನಾಥ ಗೌಳಿ, ಪ್ರಕಾಶ ನಂದಗೌಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net