

ಬೀದರ್: ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಭಿಯಾನದಡಿ ಎಲ್ಲ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರ ಧರಿಸುವಂತೆ ಸರ್ಕಾರ ಹೊರಡಿಸಿರುವ ಆದೇಶ ಜಿಲ್ಲೆಯಲ್ಲಿ ಪಾಲನೆಯಾಗುತ್ತಿಲ್ಲ ಎಂದು ನಮ್ಮ ಕರ್ನಾಟಕ ಸೇನೆ ಆರೋಪಿಸಿದೆ.
ಸೇನೆಯ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ನೇತೃತ್ವದಲ್ಲಿ ನಗರದಲ್ಲಿ ನಿಯೋಗದಲ್ಲಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ರಾಜ್ಯ ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷ ಪೂರೈಸಿರುವ ಪ್ರಯುಕ್ತ ಅಭಿಯಾನ ನಡೆಸಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ನೌಕರರು ಗುರುತಿನ ಚೀಟಿಯ ಕೊರಳುದಾರ ಧರಿಸುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರಿ ಕಚೇರಿಗಳ ಸೇವಕರು ಬಿಳಿ ಬಣ್ಣದ ಸಮವಸ್ತ್ರ ಧರಿಸುವ ನಿಯಮ ಪಾಲಿಸಬೇಕು. ಭೋಜನ ವಿರಾಮ ಇದ್ದಾಗ ಕಚೇರಿಗಳಲ್ಲಿ ಆ ಕುರಿತು ಫಲಕ ಹಾಕಬೇಕು. ಸಮಯಕ್ಕೆ ಸರಿಯಾಗಿ ಬಾರದ ನೌಕರರ ವಿರುದ್ಧ ಕ್ರಮ ಜರುಗಿಸಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಯೊಮೆಟ್ರಿಕ್ ಹಾಜರಾತಿ ಯಂತ್ರ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಸೇನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಜಕುಮಾರ ಪಾಟೀಲ, ಪ್ರಧಾನ ಕಾರ್ಯದರ್ಶಿ ಸಂಜು ಯಾದವ್, ಗಿರೀಶ್ ಬಿರಾದಾರ, ಸಂತೋಷ ಪಾಟೀಲ, ದತ್ತು ಗಿರಿ, ಅನಿಲ್ ರಾಜಗೀರಾ, ರಾಮಶೆಟ್ಟಿ ಹುಣಜೆ, ಸೋಮನಾಥ ಪಾಟೀಲ, ಸೂರ್ಯಕಾಂತ ಪಾಟೀಲ, ಬಸವರಾಜ ಕಾರಬಾರಿ, ರಾಜಕುಮಾರ ಕೋಟೆ ಮತ್ತಿತರರು ಇದ್ದರು.