

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ಐ.ಎಂ.ಎ. ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ ತರಬೇತಿಯಲ್ಲಿ ಮಕ್ಕಳು ಸ್ವತಃ ಆಕರ್ಷಕ ಮೂರ್ತಿಗಳನ್ನು ತಯಾರಿಸಿ ಗಮನ ಸೆಳೆದರು.
6 ರಿಂದ 14 ವರ್ಷದ ವರೆಗಿನ ಮಕ್ಕಳು ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸಿದರು. ಫೈನ್ ಆರ್ಟ್ ಚಿತ್ರಕಲಾ ಕಾಲೇಜು ಮುಖ್ಯಸ್ಥ ಯೋಗೀಶ್ ಮಠದ ಹಾಗೂ ದಿವ್ಯ ಮಠದ ಮಕ್ಕಳಿಗೆ ಮೂರ್ತಿ ತಯಾರಿಕೆ ತರಬೇತಿ ನೀಡಿದರು.
ಮೂರ್ತಿ ಸಿದ್ಧಪಡಿಸಿದ ಮಕ್ಕಳಿಗೆ ಕ್ಲಬ್‍ನಿಂದ ಪ್ರಮಾಣ ಪತ್ರ ವಿತರಿಸಲಾಯಿತು. ಮನೆಯಲ್ಲಿ ಪ್ರತಿಷ್ಠಾಪಿಸಲು ಮೂರ್ತಿಗಳನ್ನು ಸಹ ಕೊಡಲಾಯಿತು.
ಗಣೇಶ ಮಹಾ ಮಂಡಳ ವತಿಯಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಉತ್ತೇಜನ ನೀಡಲಾಗುವುದು ಎಂದು ಮಹಾ ಮಂಡಳದ ಮೆರವಣಿಗೆ ಸಮಿತಿಯ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಹೇಳಿದರು.
ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಗ್ಗೆ ಜಾಗೃತಿ ಮೂಡಿಸಲು ಮಕ್ಕಳಿಗೆ ಮೂರ್ತಿ ತಯಾರಿಕೆ ತರಬೇತಿ ನೀಡಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಶಿವಕುಮಾರ ಪಾಖಾಲ್ ತಿಳಿಸಿದರು.
ಮುಂದಿನ ವರ್ಷ ಮಕ್ಕಳು ಸೇರಿದಂತೆ ಒಂದು ಸಾವಿರ ಜನರಿಗೆ ಮಣ್ಣಿನ ಮೂರ್ತಿ ತಯಾರಿಕೆ ತರಬೇತಿ ಕೊಡುವ ಉದ್ದೇಶ ಇದೆ ಎಂದು ಹೇಳಿದರು.
ಮಣ್ಣಿನ ಮೂರ್ತಿಗಳು ಸುಲಭವಾಗಿ ಮನೆಯ ಕುಂಡದಲ್ಲೇ ಕರಗಿ ಹೋಗುತ್ತವೆ. ಮಣ್ಣಿನಲ್ಲಿ ಮೆಂತೆ ಬೀಜ ಹಾಕಿರುವುದರಿಂದ ಮೆಂತೆ ಬೆಳೆಯೂ ಬೆಳೆಯಲಿದೆ ಎಂದು ತಿಳಿಸಿದರು.
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಕ್ಲಬ್ ನಿಕಟಪೂರ್ವ ಅಧ್ಯಕ್ಷ ಡಾ. ಕಪಿಲ್ ಪಾಟೀಲ, ಕಾರ್ಯದರ್ಶಿ ಪ್ರಭು ತಟಪಟ್ಟಿ, ಸದಸ್ಯರಾದ ನಿತಿನ್ ಕರ್ಪೂರ, ಸತೀಶ್ ಸ್ವಾಮಿ, ಡಾ. ನಿತೇಶಕುಮಾರ ಬಿರಾದಾರ, ಡಾ. ರಿತೇಶ್ ಸುಲೆಗಾಂವ್, ಡಾ. ಮಲ್ಲಿಕಾರ್ಜುನ ಚಟ್ನಳ್ಳಿ, ಗಜಾನನ ಪೊಕಲವಾರ್, ಡಾ. ಆರತಿ ರಘು ಕೃಷ್ಣಮೂರ್ತಿ, ಡಾ. ಶ್ವೇತಾ ಸಂಗಮೇಶ ಕುಣಕೇರಿ, ಡಾ. ಶಿಲ್ಪಾ ಬುಳ್ಳಾ, ಸುಧೀಂದ್ರ ಸಿಂದೋಲ್, ಡಾ. ವಿಜಯಾ ಹತ್ತಿ, ಡಾ. ಶಿಲ್ಪಾ ರೆಡ್ಡಿ ಬೋಗಲೆ ಮತ್ತಿತರರು ಇದ್ದರು.