ವಿವಿಧ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

Bhagavant Khuba
Published on

ಬೀದರ್: ಜಿಲ್ಲೆಯಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿ ಹಾಗೂ ಯೋಜನೆಗಳನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.
ಸಂಸದ ಸಾಗರ್ ಖಂಡ್ರೆ ಅವರಿಗೆ ಪತ್ರ ಬರೆದಿರುವ ಅವರು, 2014ರಿಂದ 2024ರವರೆಗೆ ಎರಡು ಅವಧಿಯಲ್ಲಿ ಕ್ಷೇತ್ರದ ಸಂಸದನಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿರುವೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಅಸಹಕಾರದಿಂದ ಕೆಲ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದರೆ, ಕೆಲವು ಆರಂಭವಾಗಿಲ್ಲ ಎಂದು ತಿಳಿಸಿದ್ದಾರೆ.
ಬೀದರ್-ನಾಂದೇಡ್ ಹೊಸ ರೈಲ್ವೆ ಲೈನ್, ಬಲ್ಲೂರ್(ಜೆ) ಬಳಿ ಸಿಪೆಟ್ ಕಟ್ಟಡ ಕಾಮಗಾರಿ, ಸೋಲಾರ್ ಪಾಕ್೯ ನಿರ್ಮಾಣ, ಪ್ರಸಾದ ಯೋಜನೆಯಡಿ ಪಾಪನಾಶಲಿಂಗ ದೇವಸ್ಥಾನ ಅಭಿವೃದ್ಧಿ, ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ, ಭಾಲ್ಕಿ ತಾಲೂಕಿನ ಮೇಹಕರ್ ಏತ ನೀರಾವರಿ, ಔರಾದ್ ತಾಲೂಕಿನ 36 ಕೆರೆ ಭರ್ತಿ, ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನ, ಬೀದರ್ ಹೊರವಲಯದ ರಿಂಗ್ರೋಡ್ ಇತರ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಎಲ್ಲ ಯೋಜನೆಗಳಿಗೆ ಕೇಂದ್ರ ಸರ್ಕಾರದ ಸಹಕಾರವಿದ್ದರೂ ರಾಜ್ಯ ಸರ್ಕಾರ ಅಸಹಕಾರ ನೀಡುತ್ತಿದೆ ಎಂದು ದೂರಿದ್ದಾರೆ.
ಬೀದರ್ ನಗರದಲ್ಲಿ ಜಿಲ್ಲಾ ಸಂಕಿರ್ಣ ನಿರ್ಮಾಣ ದಶಕದಿಂದ ನನೆಗುದಿಗೆ ಬಿದ್ದಿದೆ. 2018ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೇರವೆರಿಸಿದ್ದರು. ಆದರೆ ಈವರೆಗೆ ಒಂದು ಕಲ್ಲು ಇಡುವ ಕೆಲಸವೂ ಆಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ನೀಡಿ ಜಾರಿಕೊಳ್ಳುತ್ತಿದ್ದಾರೆ. ಕಾಮಗಾರಿಗಳು ನನೆಗುದಿಗೆ ಬೀಳಲು ಸಚಿವ ಈಶ್ವರ ಖಂಡ್ರೆ ದ್ವೇಷ ರಾಜಕಾರಣ ಹಾಗೂ ರಾಜ್ಯ ಸರ್ಕಾರದ ಅಸಹಕಾರವೇ ಕಾರಣ. ಖಂಡ್ರೆ ಸಂಪುಟ ದರ್ಜೆ ಸಚಿವರಾಗಿದ್ದರೂ ಜಿಲ್ಲೆಯ ಅಭಿವೃದ್ಧಿ ವಿಷಯಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಎಲ್ಲ ಅಭಿವೃದ್ಧಿ ಕೆಲಸಗಳು ಆಗಬೇಕಾದರೆ ಎಲ್ಲಿಯೂ, ಯಾರ ಬಳಿಯೂ ಹೋಗಬೇಕಾಗಿಲ್ಲ. ನಿಮ್ಮ ತಂದೆಯವರಾದ ಈಶ್ವರ ಖಂಡ್ರೆ ಅವರಿಗೆ ಸ್ವಲ್ಪ ಬಿಸಿ ಮುಟ್ಟಿಸಿದರೆ ಪ್ರಾರಂಭವಾಗುತ್ತವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net