

ಬೀದರ್: ನಗರಸಭೆ ಹೊರಗುತ್ತಿಗೆ ಕಾರ್ಮಿಕರಿಗೆ ಸಮರ್ಪಕ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಡಿಸಿ ಕಚೇರಿವರೆಗೆ ರ್ಯಾಲಿ ನಡೆಸಿದ ಸಮಿತಿ ಪ್ರಮುಖರು, ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಆರು ತಿಂಗಳಿಂದ ಸರಿಯಾದ ಸಮಯಕ್ಕೆ ವೇತನ ನೀಡುತ್ತಿಲ್ಲ, ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ಈ ಬಗ್ಗೆ ಪೌರಾಯುಕ್ತರನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ವಿಚಾರಣೆ ನಡೆಸಿ ಎಲ್ಲ ಕಾರ್ಮಿಕರ ಖಾತೆಗೆ ಪ್ರತಿ ತಿಂಗಳು ವೇತನ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಅಂಬೇಡ್ಕರ್ ಮತ್ತು ಬಸವೇಶ್ವರ ವಸತಿನಿಲಯ ಫಲಾನುಭವಿಗಳ ಅನುದಾನ ಬಿಡುಗಡೆಯಾದರೂ ಅರ್ಹರಿಗೆ ಮುಟ್ಟಿಲ್ಲ. ಇದರಲ್ಲಿ ದುರ್ಬಳಕೆಯಾಗಿದ್ದು, ಸಮಗ್ರ ತನಿಖೆ ನಡೆಸಬೇಕು. ಎಸ್ಸಿಪಿ, ಟಿಎಸ್ಪಿ ಅಡಿ ಬಂದ ಅನುದಾನವನ್ನು ಪರಿಶಿಷ್ಟ ಬಡಾವಣೆಯಲ್ಲಿ ಕಾಮಗಾರಿ ಮಾಡಬೇಕೆಂಬ ನಿಯಮ ಇದೆ. ಆದರೆ ಸಾಮಾನ್ಯ ಜನರ ಓಣಿಗಳಲ್ಲಿ ಕೆಲಸ ಮಾಡಿದ್ದು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರಸಭೆಯ ವಿವಿಧ ಯೋಜನೆಗಳ ಸಮರ್ಪಕ ಜಾರಿ ಮಾಡುವಲ್ಲಿ ವಿಫಲವಾಗಿರುವ ಪೌರಾಯುಕ್ತರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಸಮಿತಿ ವಿಭಾಗೀಯ ಸಂಚಾಲಕ ಉಮೇಶಕುಮಾರ ಸ್ವಾರಳ್ಳಿಕರ್, ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ ಸಂಗಮ, ಪ್ರಮುಖರಾದ ಲಕ್ಷ್ಮೀ ದಂಡಿ, ಅಂಬೇಡ್ಕರ್ ಪಿ.ಬೌದ್ಧೆ, ಸಂದೇಶ ಭಾವಿಕಟ್ಟಿ, ಗೌತಮ ಶೇಡೋಳ, ವಿಜಯ ಸಾಮ್ರಾಟ, ದೇವರಾಜ ಡಾಕುಳಗಿ, ವಿಶಾಲ ಹೊನ್ನಾ, ಜೈಭೀಮ ಶರ್ಮಾ, ದೀಪಕ ದೊಡ್ಡಿ, ಗೌತಮ ಪ್ರಸಾದ, ತುಕಾರಾಮ ಭೂರೆ, ಸಂದೀಪ ಕಟ್ಟಿಮನಿ, ಗೋವಿಂದ ಬಡಿಗೆ, ಗೌತಮ ದೇಶಪಾಂಡೆ, ಪ್ರವೀಣ ಮೋಡಾ, ವಿನೀತ್ ಗಿರಿ ಇತರರಿದ್ದರು. ಪೌರಾಡಳಿತ ಸಚಿವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.