

ಬೀದರ್: ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವುದಾಗಿ ಮಾಜಿ ಶಾಸಕ ಅಶೋಕ ಖೇಣಿ ಹೇಳಿದರು.
ನಗರದ ರಾಂಪುರೆ ಬಡಾವಣೆಯಲ್ಲಿನ ಗೃಹ ಕಚೇರಿಯಲ್ಲಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದ ಅವರು, ಜಿಪಂ, ತಾಪಂ ಚುನಾವಣೆಯಲ್ಲಿ ಎಲ್ಲ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿ ಎಲ್ಲೆಡೆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಬೇಕು. ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆಗೆ ಮುಟ್ಟಿಸಿ ಜಾಗೃತಿ ಮೂಡಿಸಬೇಕು. ಕುಂದುಕೊರತೆ ಇದ್ದಲ್ಲಿ ಕಚೇರಿಯನ್ನು ಸಂಪರ್ಕಿಸಬೇಕು ಎಂದರು.
ಲೋಕಸಭೆ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖರಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಕಡಿಮೆ ಮತಗಳ ಅಂತರದ ಸೋಲಾಗಿದ್ದರಿಂದ ಕಾರ್ಯಕರ್ತರು ಎದೆಗುಂದಬಾರದು. ನಾನು ಸದಾ ನಿಮ್ಮ ಜತೆಗಿರುವೆ ಎಂದು ಅಭಯ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಚನ್ನಶೆಟ್ಟಿ, ಕರೀಮ್ಸಾಬ್ ಕಮಠಾಣ ಇತರರಿದ್ದರು.