ಪಿಕೆಪಿಎಸ್ ಸಿಎಸ್ಸಿಗಳಾಗಿ ಪರಿವರ್ತನೆ

Tarabeti
Published on

ಬೀದರ್: ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್)ಗಳನ್ನು ಕಾಮನ್ ಸರ್ವಿಸ್ ಸೆಂಟರ್ (ಸಾಮಾನ್ಯ ಸೇವಾ ಕೇಂದ್ರ-ಸಿಎಸ್ಸಿ)ಗಳಾಗಿ ಪರಿವರ್ತಿಸಲಾಗುತ್ತಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಆರ್. ಪಾಟೀಲ್ ಹೇಳಿದರು.
ಡಿಸಿಸಿ ಬ್ಯಾಂಕ್, ನಬಾರ್ಡ್ ಹಾಗೂ ಸಹಕಾರ ಇಲಾಖೆ ವತಿಯಿಂದ ಇಲ್ಲಿನ ನೌಬಾದ್ ಬಳಿಯ ಸಹಾರ್ದ ತರಬೇತಿ ಕೇಂದ್ರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಿಗಾಗಿ ಆಯೋಜಿಸಿದ ಎರಡು ದಿನದ ವಿಶೇಷ ತರಬೇತಿ ಉದ್ಘಾಟಿಸಿ ಮಾತನಾಡಿ, ಸಮಸಮಾಜದ ನಿರ್ಮಾಣದಲ್ಲಿ ಸಹಕಾರ ಸಂಘಗಳ ಕೊಡುಗೆ ಅಪಾರ. ವ್ಯವಹಾರದಲ್ಲಿ ಆಧುನಿಕ ಯುಗದ ಪೈಪೋಟಿಗೆ ಹೊಂದಿಕೆಯಾಗದೆ ಸಂಸ್ಥೆಗಳು ಸೊರಗುತ್ತಿವೆ. ಹೀಗಾಗಿ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು ಪಿಕೆಪಿಎಸ್ಗಳನ್ನು ಸಿಎಸ್ಸಿಗಳಾಗಿ ಪರಿವರ್ತಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 188 ಸಹಕಾರ ಸಂಘಗಳು ಇವೆ. ಬರುವ ದಿನಗಳಲ್ಲಿ ಗ್ರಾಮ ಮಟ್ಟದಲ್ಲೇ ಎಲ್ಲ ರೀತಿಯ ಕಂಪ್ಯೂಟರ್ ಸ್ನೇಹಿ ಸೌಲಭ್ಯಗಳು ಸಂಘಗಳಲ್ಲಿ ದೊರಕುವಂತೆ ಮೇಲ್ದಜರ್ೆಗೇರಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಪುರಸ್ಕೃತ ಯೋಜನೆಯಡಿ ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಹ ನಿಯಮಿತ ಸೇವೆ ನೀಡಲು ಬಿಎಸ್ಎನ್ಎಲ್ ಹೊಸ ಯೋಜನೆ ಜಾರಿಗೆ ತಂದಿದ್ದು ಪಿಕೆಪಿಎಸ್ ಗಳಿಗೆ ಹೆಚ್ಚಿನ ವೇಗದ ಇಂಟರ್ ನೆಟ್ ಸಂಪರ್ಕವನ್ನು ವಿಶೇಷವಾಗಿ ಕಮ್ಮಿ ದರದಲ್ಲಿ ಒದಗಿಲಾಗುತ್ತಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ತತ್ವಗಳ ಮೂಲ ತಳಹದಿಯಲ್ಲಿ ಸ್ಥಾಪಿತವಾಗಿರುವ ಸಂಘಗಳು ಜನರ ಆರ್ಥಿಕ ಅವಶ್ಯಕತೆಗಳನ್ನು ಅವರ ಮನೆ ಬಾಗಿಲಲ್ಲೇ ಪೂರೈಸುವ ಜವಾಬ್ದಾರಿ ಹೊಂದಿವೆ. ಸದಸ್ಯರೇ ಮಾಲಿಕರಾಗಿರುವ ವಿಶಿಷ್ಟ ವ್ಯವಸ್ಥೆ ಹೊಂದಿರುವ ಸಹಕಾರ ಸಂಘಗಳು ಸ್ವಾಯತ್ತ ಸಂಸ್ಥೆಗಳಾಗಿವೆ. ಸರ್ಕಾರದ ನೀತಿ-ನಿಯಮಗಳಿಗೆ ಬದ್ಧವಾಗಿ ವ್ಯಾಪಾರದಲ್ಲಿ ಶೋಷಣೆ ತಡೆಗಟ್ಟುವ ಗುರಿ ಹೊಂದಿವೆ ಎಂದು ಹೇಳಿದರು.
ಸ್ವಾವಲಂಬಿಯಾಗುವ ಜತೆಗೆ ಜನರಿಗೆ ಉತ್ತಮ ಸೇವೆ ನೀಡುವಲ್ಲಿ ಸಹಕಾರ ಸಂಘಗಳು ಮುಂಚೂಣಿಯಲ್ಲಿವೆ. ಸಹಕಾರ ವ್ಯವಸ್ಥೆ ನಮ್ಮಲ್ಲಿ ಇನ್ನಷ್ಟು ಬಲಗೊಳ್ಳಬೇಕಿದೆ. ಅದಕ್ಕಾಗಿ ಸರ್ಕಾರ ಸಂಘಗಳಿಗೆ ಹಲವು ರೀತಿಯ ಸಬ್ಸಿಡಿ, ಪ್ರೋತ್ಸಾಹಧನ, ಬಡ್ಡಿದರದಲ್ಲಿ ಸಹಾಯಧನ, ಕೃಷಿ ಉತ್ಪನ್ನಗಳ ಖರೀದಿ ಕೇಂದ್ರ ಮೊದಲಾದ ಸೌಲಭ್ಯ ನೀಡುತ್ತಿದೆ ಎಂದು ತಿಳಿಸಿದರು.
ಬದಲಾಗುವ ಸನ್ನಿವೇಶಗಳಿಗೆ ತಕ್ಕಂತೆ ವ್ಯವಹಾರದಲ್ಲಿ ಬದಲಾವಣೆ ತರುವ ಅಗತ್ಯವಿದೆ. ನೂತನ ವ್ಯವಹಾರಗಳನ್ನು ಆರಂಭಿಸುವ ಮತ್ತು ಹೊಸ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕವಾಗಿ ಪೈಪೋಟಿ ನಡೆಸಬೇಕಿದೆ. ಇಲ್ಲವಾದಲ್ಲಿ ಜನರಿಂದ ಜನರಿಗಾಗಿ ಜನರೇ ನಿರ್ಮಿಸಿಕೊಂಡ ಈ ವ್ಯವಸ್ಥೆ ಕುಸಿಯುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಕೃಷಿ ಆಧಾರಿತ ವ್ಯವಹಾರ ಮತ್ತು ರೈತರಿಗೆ ಆರ್ಥಿಕ ಸಹಾಯ ನೀಡುವ ಸಹಕಾರ ಸಂಸ್ಥೆಗಳು ಕೃಷಿಕರ ಜೀವನಾಡಿ ಮತ್ತು ಆಸ್ತಿಯಾಗಿವೆ. ಗ್ರಾಮೀಣ ಜನರ ಆರ್ಥಿಕ ಸ್ವಾತಂತ್ರ್ಯಕ್ಕೆ ಮತ್ತು ಸ್ವಾವಲಂಬಿತನಕ್ಕೆ ಶ್ರಮಿಸುವ ಸಂಘಗಳು ತಮ್ಮ ಸೇವೆಯ ಗುಣಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಸಂಜು ಸ್ವಾಮಿ ಉಪನ್ಯಾಸ ನೀಡಿದರು. ತರಬೇತಿ ಕೇಂದ್ರ ನಿರ್ದೇಶಕ ಸುಬ್ರಮಣ್ಯ ಪ್ರಭು ಸ್ವಾಗತಿಸಿದರು. ಮಂಜುನಾಥ ಭಾಗವತ್ ನಿರೂಪಣೆ ಮಾಡಿದರು. ಅನಿಲ್ ಪರೇಶ್ಯಾನೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net