

ಬೀದರ್: ನೂತನ ಜನಪ್ರತಿನಿಧಿಗಳು, ಸರ್ಕಾರದ ವಿವಿಧ ಸಂಸ್ಥೆಗಳಿಗೆ ನೇಮಕಗೊಂಡಿರುವವರು ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜತೆ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷದ ಜನಪ್ರತಿನಿಗಳ ಮೇಲೆ ಜನತೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಆಶಯದಂತೆ ಕೆಲಸ ಮಾಡಿ ತೋರಿಸಬೇಕು ಎಂದರು.
ಲೋಕಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮತದಾರರ ಒಲವು ಅಪಾರವಾಗಿತ್ತು. ಸಾಗರ್ ಖಂಡ್ರೆ ಹುಡುಗ ಎಂದು ಕೇವಲವಾಗಿ ಬಿಜೆಪಿಯ ಭಗವಂತ ಖೂಬಾ ಪರಿಗಣಿಸಿದ್ದರು. ಆದರೆ ಕ್ಷೇತ್ರದ ಜನತೆ ಖಂಡ್ರೆ ಅವರನ್ನು 1.25 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿದರು ಎಂದು ಹೇಳಿದರು.
ಸಂಸದ ಸಾಗರ್ ಖಂಡ್ರೆ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುವೆ. ವಿಶೇಷವಾಗಿ ಕುಡಿಯುವ ನೀರು ಮತ್ತು ಆರೋಗ್ಯ ಕ್ಷೇತ್ರವನ್ನು ಆದ್ಯತೆಯಾಗಿ ತೆಗೆದುಕೊಳ್ಳಲಾಗುವುದು. ನಾನು ವಯಸ್ಸಿನಲ್ಲಿ ಇನ್ನೂ ಚಿಕ್ಕವ. ತಪ್ಪುಗಳಾದರೆ ಗಮನಕ್ಕೆ ತನ್ನಿ ಎಂದರು.
ಪೌರಾಡಳಿತ ಸಚಿವ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಮಾಜಿ ಶಾಸಕರಾದ ಅಶೋಕ ಖೇಣಿ, ಅರವಿಂದಕುಮಾರ ಅರಳಿ, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸೊದ್ದೀನ್, ಪ್ರಮುಖರಾದ ಧನರಾಜ ತಾಳಂಪಳ್ಳಿ, ಭೀಮಸೇನರಾವ ಸಿಂದೆ, ಆನಂದ ದೇವಪ್ಪ, ದತ್ತಾತ್ರಿ ಮೂಲಗೆ, ವಿನೋದ ಅಪ್ಪೆ, ಚಂದ್ರಕಾಂತ ಹಿಪ್ಪಳಗಾಂವ, ಮನ್ನಾನ್ ಸೇಠ್, ಇರ್ಷಾದ್ ಪೈಲ್ವಾನ್, ಚಂದ್ರಶೇಖರ ಚನ್ನಶೆಟ್ಟಿ, ರಾಜಕುಮಾರ ಹಲಬುರ್ಗೆ, ಅಫ್ಸರ್ ಮಿಯ್ಯಾ, ಬಾಬು ಹೊನ್ನಾನಾಯಕ್ ಇತರರಿದ್ದರು.
ಸಂಸದ ಸಾಗರ್ ಖಂಡ್ರೆ, ವಿಧಾನ ಪರಿಷತ್ ಗೆ ಪುನರಾಯ್ಕೆ ಆದ ಡಾ.ಚಂದ್ರಶೇಖರ ಪಾಟೀಲ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹಾಗೂ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.