

ಬೀದರ್: ವಸ್ತು ಪ್ರದರ್ಶನಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುತ್ತವೆ ಎಂದು ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ ಹೇಳಿದರು.
ನಗರದ ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಯೋಜನಾ ಕಾರ್ಯ ಪ್ರಸ್ತುತಿ ಮತ್ತು ವಿಜ್ಞಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾದರೆ ಪ್ರಯೋಜನವಿಲ್ಲ. ಜ್ಞಾನವನ್ನು ವಿಸ್ತರಿಸಿದಾಗ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಬರುತ್ತದೆ ಎಂಬುದಕ್ಕೆ ಈ ಪ್ರದರ್ಶನ ಸಾಕ್ಷಿ ಎಂದರು.
ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಸುನೀಲಕುಮಾರ ಎನ್.ಎಂ. ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಲು ಇಂಥ ಪ್ರದರ್ಶನಗಳು ನಿರಂತರ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನರಿಗೆ ಶಿಕ್ಷಣದ ಜತೆಗೆ ಕೌಶಲ ತರಬೇತಿ ಅಗತ್ಯವಾಗಿದೆ. ವೃತ್ತಿ ಕೌಶಲ ಇದ್ದಾಗ ಮಾತ್ರ ಉದ್ಯೋಗ ದೊರೆಯಲು ಸಾಧ್ಯ ಎಂದರು.
ಗುರುನಾನಕ್ ಶಾಲೆ ಆಡಳಿತ ಮಂಡಳಿ ಉಪಾಧ್ಯಕ್ಷೆ ಡಾ.ರೇಷ್ಮಾ ಕೌರ್ ಮಾತನಾಡಿದರು. ಶ್ರೀ ನಾನಕ್ ಝೀರಾ ಸಾಹೇಬ್ ಫೌಂಡೇಷನ್ ಅಧ್ಯಕ್ಷ ಡಾ.ಎಸ್. ಬಲಬೀರಸಿಂಗ್, ಪ್ರಾಚಾರ್ಯೆ ನಳಿನಿ ಡಿ.ಜಿ., ಅಮ್ಜದ್ ಅಲಿ, ಹನುಮಾನ, ಆರೀಫ್ ಹಾದಿ ಇತರರಿದ್ದರು.