ಮತದಾರ ಕರಡು ಪಟ್ಟಿ ಪ್ರಕಟಿಸಿ

Rajkumar Malge
Published on

ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಶೀಘ್ರ ನಡೆಯಲಿದ್ದು, ಜಿಲ್ಲಾ ಘಟಕ ಮತದಾರರ ಪಟ್ಟಿ ಪ್ರಕಟಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಮಾಳಗೆ ಆಗ್ರಹಿಸಿದ್ದಾರೆ.
ಸಂಘದ ಬೈಲಾ ಪ್ರಕಾರ ಮತದಾರರ ಕರಡು ಪಟ್ಟಿ ಜು.1ರಂದು ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಜು.10ರವರೆಗೆ ಕಾಲಾವಕಾಶ ನೀಡಬೇಕಿತ್ತು. ಈ ಸಂಬಂಧ ಕೇಂದ್ರ ಸಂಘದಿಂದ ಜಿಲ್ಲಾ ಶಾಖೆಗಳಿಗೆ ಸೂಚನೆ ಕೊಡಲಾಗಿದೆ. ಹೀಗಿದ್ದರೂ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮತ್ತು ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಗಂದಗೆ ಆ್ಯಂಡ್ ಟೀಮ್ ಎಲ್ಲ ನಿಯಮ ಗಾಳಿಗೆ ತೂರಿ ಮನಬಂದಂತೆ ನಡೆದುಕೊಳ್ಳುತ್ತಿದೆ. ಹಿಂಬಾಗಿಲಿನಿಂದ 2024-25ರ ಚುನಾವಣೆಯಲ್ಲಿ ಅಕಾರ ಗಿಟ್ಟಿಸಲು ಯತ್ನಿಸುತ್ತಿದೆ. ಕರಡು ಮತದಾರರ ಪಟ್ಟಿ ನೀಡುವಂತೆ ಎರಡು ಬಾರಿ ಕೇಳಿದರೂ ಗಂದಗೆ ಉಡಾಫೆ ಮಾತನಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಸಂಘದ ಚುನಾವಣೆ ಪಾರದರ್ಶಕ ನಡೆಯಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು, ಅಧಿಕಾರಿಗಳ ಹೆಸರು ಮತಪಟ್ಟಿಯಲ್ಲಿ ಸೇರಿಸಬೇಕು. ಮತದಾನ ಹಕ್ಕಿನಿಂದ ಯಾವೊಬ್ಬ ನೌಕರ ವಂಚಿತರಾಗಬಾರದು. ಈ ಹಿಂದೆ ಮಾಡಿದಂತೆ ತನಗೆ ಬೇಡಾದ ನೌಕರರ ಹೆಸರು ಮತದಾರ ಪಟ್ಟಿಯಿಂದ ಕೈಬಿಟ್ಟರೆ ಸಹಿಸುವುದಿಲ್ಲ. ಸಂಘದ ಜಿಲ್ಲಾ ಘಟಕ ಕೂಡಲೇ ಮತದಾರರ ಕರಡು ಪಟ್ಟಿ ಪ್ರಕಟಿಸದಿದ್ದರೆ ಕಾನೂನು ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net