

ಬೀದರ್: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಕ್ರಮ ವಿರೋಧಿಸಿ ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ವೇದಿಕೆ ಪ್ರಮುಖರು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರ ಇಲ್ಲ. ಖಾಸಗಿ ದೂರು ಆಧರಿಸಿ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿದೆ. ವಿವಿಧ ಜನಪ್ರತಿನಿಗಳ ವಿರುದ್ಧ ಸಲ್ಲಿಕೆಯಾದ ಹಲವು ದೂರುಗಳಿದ್ದರೂ ಪರಿಗಣಿಸದೆ ಸಿಎಂ ವಿರುದ್ಧದ ಕಂಪ್ಲೆಂಟ್ ಮಾತ್ರ ಪರಿಗಣಿಸಿದ್ದು ಸರಿಯಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಮುಖಂಡರಾದ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ದನರೆಡ್ಡಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಹಾಗೂ ಎಸ್ಐಟಿ ಚಾಜ್೯ಶೀಟ್ ಸಲ್ಲಿಸಿದ್ದು, ಒಂಬತ್ತು ತಿಂಗಳಿಂದ ರಾಜ್ಯಪಾಲರ ಅನುಮತಿ ನಿರೀಕ್ಷೆಯಲ್ಲಿವೆ. ಆದರೆ ಈವರೆಗೆ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರದ ಅಣತಿಯಂತೆ ನಡೆದುಕೊಳ್ಳುತ್ತಿರುವ ರಾಜ್ಯಪಾಲರನ್ನು ತಕ್ಷಣ ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ವೇದಿಕೆ ಸಂಸ್ಥಾಪಕ ಭಾಸ್ಕರಬಾಬು ಪಾತರಪಳ್ಳಿ, ಜಿಲ್ಲಾಧ್ಯಕ್ಷ ರಾಜೇಶ ಜ್ಯೋತಿ, ಕಾರ್ಯಾಧ್ಯಕ್ಷ ಸಾಮಸನ್ ಹಿಪ್ಪಳಗಾಂವ, ನರಸಿಂಗ ಮಿರ್ಜಾಪುರ, ಪ್ರಕಾಶ ಕೋಟೆ, ಸುನೀಲ ಹಿರೇಮನಿ, ಸಾಲೋಮನ್ ಡಾಕುಳಗಿಕರ್, ಸುಕಿರ್ತಾ ವಗ್ಗೆ, ಸಂತೋಷಿ ರಾಜಕುಮಾರ, ಕೆ.ಎಸ್. ಶಾಂತಕುಮಾರ, ದಶರಥ ಮೀಸೆ, ಶಿವಕುಮಾರ ಪಾತರಪಳ್ಳಿ, ಅರ್ಜುನ ಅಲ್ಲಾಪುರ, ಮಾರುತಿ ಜ್ಯೋತಿ, ಇಮಾನ್ವೇಲ್ ಮಂದಕನಳ್ಳಿ, ಅಶೋಕ ರುದನೂರ, ಶಿವರಾಜ ಕರುಣೆ, ಸಚಿನ್, ಅಬ್ರಹಂ, ಶ್ಯಾಮಸನ್, ದೇವಿಂದ್ರ ಜ್ಯೋತಿ, ರೋಷನ್ ಮಳಚಾಪುರ, ಜಗನ್ನಾಥ ಕೌಠಾ, ಬಸವರಾಜ, ಸುಭಾಷ, ಜೈವಂತ ಇತರರಿದ್ದರು. ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.