

ಬೀದರ್: ನಗರದ ಐ.ಎಂ.ಎ. ಹಾಲ್ ಸಮೀಪದ ಓಂ ನಮಃ ಶಿವಾಯ ಆಶ್ರಮದಲ್ಲಿ ಆಗಸ್ಟ್ 26 ರಂದು ಬೆಳಿಗ್ಗೆ 11.30ಕ್ಕೆ ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ 57ನೇ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಮಿತಿಯ ಭಾಲ್ಕಿ ತಾಲ್ಲೂಕು ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ತಿಳಿಸಿದ್ದಾರೆ.
ಹುಲಸೂರಿನ ಶಿವಾನಂದ ಸ್ವಾಮೀಜಿ ಮತ್ತು ಮಳಚಾಪುರದ ಸಿದ್ಧಾರೂಢ ಆಶ್ರಮದ ಸದೃಪಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು. ಸಂಸದ ಸಾಗರ್ ಖಂಡ್ರೆ ಹಾಗೂ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಜಂಟಿಯಾಗಿ ಉದ್ಘಾಟಿಸುವರು ಎಂದು ಹೇಳಿದ್ದಾರೆ.
ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಬಿ.ಡಿ.ಎ. ಮಾಜಿ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಗುರುದ್ವಾರ ಪ್ರಬಂಧಕ ಕಮಿಟಿಯ ಅಧ್ಯಕ್ಷ ಸರ್ದಾರ್ ಬಲಬೀರಸಿಂಗ್, ಹಿರಿಯ ಪತ್ರಕರ್ತ ಸದಾನಂದ ಜೋಶಿ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಮುಖಂಡರಾದ ಬಾಬುರಾವ್ ಮಲ್ಕಾಪುರೆ, ಮಾರುತಿ ಬೌದ್ಧೆ, ಅಲ್ಬರ್ಟ್ ಕೋಟೆ, ಮುಫ್ತಿ ಗಫಾರ್ ಸಾಬ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜನ್ಮದಿನದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ನಡೆಯಲಿದೆ. ಬೈಕ್ ಸವಾರರಿಗೆ ಉಚಿತ ಹೆಲ್ಮೆಟ್ ವಿತರಣೆ, ಮಾಜಿ ಸೈನಿಕರು, ರೈತರು, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಹಾಗೂ ಮಹಾ ಪ್ರಸಾದ ವಿತರಣೆಯೂ ಜರುಗಲಿದೆ ಎಂದು ಹೇಳಿದ್ದಾರೆ.
ಭಕ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಾರ್ಯಕ್ರಮದ ಸಂಘಟಕರೂ ಆದ ಅವರು ಕೋರಿದ್ದಾರೆ.