

ಬೀದರ್: ಸಮಾಜ ಸುಧಾರಣೆ ಹರಿಕಾರ ಮಾಜಿ ಸಿಎಂ ಡಿ.ದೇವರಾಜ ಅರಸು, ಜಾತಿ-ಭೇದ ಮೆಟ್ಟಿ ಪ್ರಗತಿ ಕಾರ್ಯ ಮಾಡಿದ್ದರು. ಬುದ್ಧ, ಬಸವ, ಅಂಬೇಡ್ಕರ್ ಆಶಯದಂತೆ ಸಮಾಜದ ಕಟ್ಟ ಕಡೆ ವ್ಯಕ್ತಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಶ್ರಮಿಸಿದ್ದರು ಎಂದು ಪೌರಡಾಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಡಿ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಆಯೋಜಿಸಿದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತ್ಯುತ್ಸವ ಉದ್ಘಾಟಿಸಿದ ಅವರು, ಕೆಳವರ್ಗದ ಶೋಷಿತ ಜನರ ಏಳಿಗೆಗಾಗಿ ಅರಸು ಶ್ರಮಿಸಿದ್ದರು ಎಂದರು.
ಹಿಂದುಳಿದ ವರ್ಗದ ಸಣ್ಣ ಸಣ್ಣ ಜಾತಿಗಳನ್ನು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಮುಂದೆ ಬರಲು ಅವರ ಕೊಡುಗೆ ಅಪಾರ. ಹಲವಾರು ವಸತಿನಿಲಯ ಹಾಗೂ ಶಾಲೆಗಳನ್ನು ತೆರೆದು ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಅರಸು ಆಡಳಿತ ನೀಡಿದ್ದರು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ ಮಾತನಾಡಿ, ಮಲ ಹೋರುವ ಪದ್ಧತಿಯನ್ನು ತೆಗೆದು ಹಾಕಿದ್ದು ಡಿ.ದೇವರಾಜ ಅರಸು ಆಡಳಿತದಲ್ಲಿ. ಬಡವರು, ನಿರ್ಗತಿಕರಿಗೆ ವಸತಿ ಸೇರಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿ ಮುಖ್ಯ ವಾಹಿನಿಗೆ ತಂದಿದ್ದಾರೆ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಹ ಪ್ರಾಧ್ಯಪಾಕ ಡಾ.ಸುಚಿತಾನಂದ ಮಲ್ಕಾಪುರೆ ವಿಶೇಷ ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷ ಮಹ್ಮದ್ ಗೌಸೊದ್ದೀನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಿಪಂ ಯೋಜನಾಧಿಕಾರಿ ಜಗನ್ನಾಥ ಮೂರ್ತಿ, ಬಿಸಿಎಂ ಜಿಲ್ಲಾ ಅಧಿಕಾರಿ ಸಂಗೀತಾ ಬಿರಾದಾರ್ ಇತರರಿದ್ದರು.
ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.