

ಬೀದರ್: ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವ ಪ್ರಯುಕ್ತ ಆಗಸ್ಟ್ 24 ರಂದು ಬೆಳಿಗ್ಗೆ 9:30ಕ್ಕೆ ನಗರದ ಪ್ರತಾಪನಗರದ ಜನಸೇವಾ ಶಾಲೆಯಲ್ಲಿ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕಥೆ ಹೇಳುವುದು, ಚಿತ್ರಕಲೆ, ಭಾಷಣ, ಶಾಸ್ತ್ರಿಯ ನೃತ್ಯ, ರಂಗೋಲಿ, ಸಮೂಹ ಗಾಯನ, ಹಗ್ಗ ಜಿಗಿದಾಟ, ಸೂರ್ಯ ನಮಸ್ಕಾರ, ರಸಪ್ರಶ್ನೆ, ಭಜನೆ, ಕೋಲಾಟ ಸೇರಿ 14 ಸ್ಪರ್ಧೆಗಳು ಜರುಗಲಿವೆ ಎಂದು ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ತಿಳಿಸಿದ್ದಾರೆ.
ಜಿಲ್ಲೆಯ ಎಂಟು ತಾಲ್ಲೂಕುಗಳ ತಾಲ್ಲೂಕು ಮಟ್ಟದ ಸ್ಪರ್ಧೆಗಳಲ್ಲಿ 3,500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ಪ್ರಥಮ ಸ್ಥಾನ ಗಳಿಸಿದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಜಿಲ್ಲಾಮಟ್ಟದಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 22ರಂದು ಕಲಬುರಗಿಯಲ್ಲಿ ವಿಭಾಗ ಮಟ್ಟದ ಸ್ಪರ್ಧೆ ನಡೆಯಲಿವೆ ಎಂದು ಹೇಳಿದ್ದಾರೆ.
ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.