

ಬಸವಕಲ್ಯಾಣ: ಸರ್ಕಾರಿ ನೌಕರರಂತೆ ರಾಜ್ಯ ರಸ್ತೆ ಸಾರಿಗೆ ನೌಕರರಿಗೂ ಸರಿಸಮಾನ ವೇತನ ನೀಡಬೇಕು ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘದಿಂದ ನಮ್ಮ ದುಡಿಮೆ-ನಮ್ಮ ಹಕ್ಕು ಜಾಥಾ ನಗರದಲ್ಲಿ ಆರಂಭವಾಯಿತು.
ಪರುಷಕಟ್ಟೆಯಿಂದ ಹೊರಟ ಜಾಥಾ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಿ ಸೆ.4ರಂದು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಿದೆ.
ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿಗೊಳಿಸಿದ್ದು ಖುಷಿ ತಂದಿದೆ. ಅದೇ ರೀತಿ ರಾಜ್ಯ ಎಲ್ಲ ನಿಗಮದ ಸಾರಿಗೆ ನೌಕರರಿಗೆ ವೇತನ ನೀಡಬೇಕು. ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿ ಬಿಡುಗಡೆ ಮಾಡಬೇಕು. ಸಾರಿಗೆ ನೌಕರರು ಮತ್ತು ಅವರ ಕುಟುಂಬಕ್ಕೆ ನಗದುರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಒದಗಿಸಿ ಆಡಳಿತ ವರ್ಗದಿಂದ ಕಾರ್ಮಿಕರಿಗೆ ಆಗುತ್ತಿರುವ ಶೋಷಣೆ, ಕಿರುಕುಳ ತಡೆಗಟ್ಟಲು ವಿಭಾಗದ ಕಾರ್ಮಿಕ ಮುಖಂಡರು ಮತ್ತು ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಬೇಕು ಎಂಬಿತ್ಯಾದಿ ಬೇಡಿಕೆಗಳೊಂದಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಪ್ರಮುಖರು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಚಾಲನೆ ನೀಡಿದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಮಹಾದೇವಯ್ಯ, ಜಿಲ್ಲಾದ್ಯಕ್ಷ ಜಾನ್ಸನ್ ಜನವಾಡಕರ್, ಪ್ರಮುಖರಾದ ಸೋಮಶೇಖರ ಸಜ್ಜನ್, ಬಬಲೇಶ್ವರ, ದೇವರಾಜ ಚೌರ, ಗುಂಡಪ್ಪ, ಗಣಪತಿ ಸಂಕ್ರೆಪ್ಪನೋರ್, ಕವಿರಾಜ ಮುಳಗೆ, ಮಲ್ಲಿಕಾರ್ಜುನ, ಧನಶೆಟ್ಟಿ ಮನ್ನಾಳೆ, ಮಹಾದೇವ ಇಸ್ಲಾಂಪುರ, ಸಾದಿಕ್, ಸಂಜು, ವಿಜಯಕುಮಾರ ಇತರರಿದ್ದರು.