ಉದ್ಘಾಟನೆಗೆ ಅಣಿಯಾದ ಬೃಹತ್ ಡೈನಿಂಗ್ ಹಾಲ್

Noukarar Bhavan Dining Hall
Published on

ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ಇಲ್ಲಿಯ ಪ್ರತಾಪನಗರದ ತನ್ನ ಸಮುದಾಯ ಭವನದಲ್ಲಿ ನಿರ್ಮಿಸಿದ 14 ಸಾವಿರ ಚದರ್ ಅಡಿಯ ಬೃಹತ್ ಡೈನಿಂಗ್ ಹಾಲ್ ಉದ್ಘಾಟನೆಗೆ ಅಣಿಯಾಗಿದೆ.
ಜಿಲ್ಲೆಯ ಜನಪ್ರತಿನಿಧಿಗಳ ರೂ. 66 ಲಕ್ಷ ಅನುದಾನ ಹಾಗೂ ಸಂಘದ ಸಂಪನ್ಮೂಲಗಳ ರೂ. 32.16 ಲಕ್ಷ ಬಳಸಿ ಒಟ್ಟು ರೂ. 98.16 ಲಕ್ಷ ವೆಚ್ಚದಲ್ಲಿ ಡೈನಿಂಗ್ ಹಾಲ್ ನಿರ್ಮಾಣ ಮಾಡಲಾಗಿದೆ.
ಡೈನಿಂಗ್ ಹಾಲ್‍ನಲ್ಲಿ ಎಕಕಾಲಕ್ಕೆ 2 ಸಾವಿರ ಜನ ಭೋಜನ ಸವಿಯಬಹುದಾಗಿದೆ. ಮಹಿಳೆಯರು, ಪುರುಷರು ಹಾಗೂ ಗಣ್ಯರಿಗೆ ಪ್ರತ್ಯೇಕ ವಿಭಾಗಕ್ಕೆ ಅವಕಾಶ ಇದೆ. ವಾಶ್ ಬಸಿನ್, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ಮೊದಲಾದ ಸೌಲಭ್ಯಗಳನ್ನು ಒಳಗೊಂಡಿದೆ.
ಜಿಲ್ಲೆಯ ಸಂಸದರು, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಘದ ಪದಾಧಿಕಾರಿಗಳು ಹಾಗೂ ನೌಕರರ ಸಹಕಾರದಿಂದ ಸುಸಜ್ಜಿತ ಡೈನಿಂಗ್ ಹಾಲ್ ನಿರ್ಮಾಣಗೊಂಡಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.
ಡೈನಿಂಗ್ ಹಾಲ್‍ಗೆ ಮಾಜಿ ಸಂಸದ ಭಗವಂತ ಖೂಬಾ ರೂ. 11 ಲಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ರಘುನಾಥರಾವ್ ಮಲ್ಕಾಪುರೆ ರೂ. 10 ಲಕ್ಷ, ಪೌರಾಡಳಿತ ಸಚಿವ ರಹೀಂಖಾನ್, ಮಾಜಿ ಸಂಸದ ದಿ. ಎನ್. ಧರ್ಮಸಿಂಗ್, ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಳ್ಳಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವಿಜಯಸಿಂಗ್, ಅಮರನಾಥ ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಶರಣಪ್ಪ ಮಟ್ಟೂರ ಹಾಗೂ ಶಶೀಲ್ ನಮೋಶಿ ತಲಾ ರೂ. 5 ಲಕ್ಷ ಅನುದಾನ ಒದಗಿಸಿದ್ದಾರೆ. ಉಳಿದ ಹಣವನ್ನು ಸಂಘದ ಸಂಪನ್ಮೂಲಗಳಿಂದ ಹೊಂದಿಸಲಾಗಿದೆ ಎಂದು ಹೇಳಿದ್ದಾರೆ.
2014 ರಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಅವರು ಶಾಸಕರಾಗಿದ್ದಾಗ ಡೈನಿಂಗ್ ಹಾಲ್ ಶಂಕುಸ್ಥಾಪನೆ ನೆರವೇರಿತ್ತು. ನನ್ನ ಅವಧಿಯಲ್ಲೇ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಯುತ್ತಿರುವುದು ಸಂತಸ ಉಂಟು ಮಾಡಿದೆ. ಡೈನಿಂಗ್ ಹಾಲ್‍ನಿಂದ ನೌಕರರ ಮಕ್ಕಳ ಮದುವೆ, ಖಾಸಗಿ ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ದಿ. ಬಸವರಾಜ ಭರಶೆಟ್ಟಿ ಅವರು ಸಂಘದಿಂದ ಜಾಗ ಖರೀದಿಸಿ, ಸಮುದಾಯ ಭವನ ಕಟ್ಟಿಸಿದ್ದರು. ಹೀಗಾಗಿ ಸ್ಮರಣಾರ್ಥವಾಗಿ ಭವನದಲ್ಲಿ ರೂ. 5 ಲಕ್ಷ ವೆಚ್ಚದಲ್ಲಿ ಬಸವರಾಜ ಭರಶೆಟ್ಟಿ ಮೀಟಿಂಗ್ ಹಾಲ್ ನಿರ್ಮಿಸಲಾಗಿದೆ. ಅದರೊಳಗೆ ಈವರೆಗೆ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಜನಾರ್ದನ್, ಬಸವರಾಜ ಭರಶೆಟ್ಟಿ, ರಾಜೇಂದ್ರ ಜೊನ್ನಿಕೇರಿ ಹಾಗೂ ರಾಜೇಂದ್ರಕುಮಾರ ಗಂದಗೆ ಅವರ ಭಾವಚಿತ್ರ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆ
ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಂದ ಆಗಸ್ಟ್ 15 ರಂದು ಮಧ್ಯಾಹ್ನ 12.30ಕ್ಕೆ ಡೈನಿಂಗ್ ಹಾಲ್ ಉದ್ಘಾಟನೆಗೊಳ್ಳಲಿದೆ. ಇದರೊಂದಿಗೆ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸರ್ವ ಸದಸ್ಯರ ಸಾಮಾನ್ಯ ಸಭೆ ಹಾಗೂ ಜಿಲ್ಲೆಯ ನೂತನ ಸಂಸದರು ಮತ್ತು ಶಾಸಕರ ಅಭಿನಂದನಾ ಸಮಾರಂಭವೂ ಜರುಗಲಿದೆ.
ಪೌರಾಡಳಿತ ಸಚಿವ ರಹೀಂಖಾನ್ ಅವರು ಬಸವರಾಜ ಭರಶೆಟ್ಟಿ ಮೀಟಿಂಗ್ ಹಾಲ್ ಉದ್ಘಾಟಿಸುವರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಪ್ರತಿಭಾ ಪುರಸ್ಕಾರ ಪ್ರದಾನ ಮಾಡುವರು.
ಸಂಸದ ಸಾಗರ್ ಖಂಡ್ರೆ, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಶಶೀಲ್ ನಮೋಶಿ, ಎಂ.ಜಿ. ಮುಳೆ ಹಾಗೂ ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್ ಅವರನ್ನು ಅಭಿನಂದಿಸಲಾಗುವುದು.
ನೌಕರರ ಸಂಘದ 100 ಹಿತೈಷಿಗಳಿಗೆ ಸತ್ಕರಿಸಲಾಗುವುದು. ಸಂಘದ ಐದು ವರ್ಷಗಳ ಸಾಧನೆಯ ‘ಸಾಧನಾ ಪಥ’ ಪಥ ಕೃತಿ ಬಿಡುಗಡೆ ಮಾಡಲಾಗುವುದು.
ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಗಳಿಸಿದ 150 ನೌಕರರ ಮಕ್ಕಳಿಗೆ ತಲಾ ರೂ. 1 ಸಾವಿರ ಪ್ರೋತ್ಸಾಹ ಧನದೊಂದಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.
ಶಾಸಕರಾದ ಪ್ರಭು ಚವಾಣ್, ಶರಣು ಸಲಗರ್, ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ಧಲಿಂಗಪ್ಪ ಪಾಟೀಲ, ಭೀಮರಾವ್ ಪಾಟೀಲ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಮಾಜಿ ಸಚಿವರಾದ ರಾಜಶೇಖರ ಪಾಟೀಲ, ಬಂಡೆಪ್ಪ ಕಾಶೆಂಪುರ, ವಿಧಾನ ಪರಿಷತ್ ಮಾಜಿ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ವಿಜಯಸಿಂಗ್, ಶರಣಪ್ಪ ಮಟ್ಟೂರ, ಅರವಿಂದಕುಮಾರ ಅರಳಿ, ಅಮರನಾಥ ಪಾಟೀಲ, ಜಿ.ಎನ್. ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಬಿ.ಡಿ.ಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ನಗರಸಭೆ ಸದಸ್ಯ ವೀರಶೆಟ್ಟಿ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ವಿಶೇಷ ಆಹ್ವಾನಿತರಾಗಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಡಾ. ಶರಣಪ್ಪ ಮುಡಬಿ, ಓಂಕಾಂತ ಸೂರ್ಯವಂಶಿ, ಶೇಕ್ ಮಹೆಬೂಬ್ ಪಟೇಲ್, ರವೀಂದ್ರ ರೆಡ್ಡಿ, ಸಂತೋಷ ಪಾಟೀಲ, ಪಾಂಡುರಂಗ ಬೆಲ್ದಾರ್, ಶಿವರಾಜ ಕಪಲಾಪುರೆ, ರಾಜಕುಮಾರ ಬಿರಾದಾರ, ಸಂಜು ಸೂರ್ಯವಂಶಿ ಹಾಗೂ ಪೀಟರ್ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net